ADVERTISEMENT

ಮೊದಲ ಡಬ್ಲ್ಯುಐಎಂ ನಾರ್ಮ್ ಪಡೆದ ಬೆಂಗಳೂರಿನ ಚಾರ್ವಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 18:56 IST
Last Updated 5 ಡಿಸೆಂಬರ್ 2025, 18:56 IST
ಚಾರ್ವಿ ಅನಿಲ್‌ ಕುಮಾರ್
ಚಾರ್ವಿ ಅನಿಲ್‌ ಕುಮಾರ್   

ಬೆಂಗಳೂರು: ಮೂರು ದಿನಗಳ ಹಿಂದಷ್ಟೇ 2300 ಇಎಲ್‌ಒ ರೇಟಿಂಗ್ ದಾಟಿದ ವಿಶ್ವದ ಎರಡನೇ ಅತಿ ಕಿರಿಯ ಆಟಗಾರ್ತಿ ಎನಿಸಿದ್ದ ನಗರದ ಪ್ರತಿಭಾನ್ವಿತ ಚೆಸ್‌ ಆಟಗಾರ್ತಿ ಚಾರ್ವಿ ಅನಿಲ್‌ ಕುಮಾರ್ ಈಗ ಸ್ಪೇನ್‌ನ ಟೂರ್ನಿಯೊಂದರಲ್ಲಿ ತನ್ನ ಮೊದಲ ‘ಮಹಿಳಾ ಇಂಟರ್‌ನ್ಯಾಷನಲ್ ಮಾಸ್ಟರ್‌’ (ಡಬ್ಲ್ಯುಐಎಂ) ನಾರ್ಮ್ ಪಡೆದಿದ್ದಾಳೆ.

‘ಚಾರ್ವಿ ಶುಕ್ರವಾರವಷ್ಟೇ ಸ್ಪೇನ್‌ನ ಬೆನಿಡೋರ್ಮ್‌ನಲ್ಲಿ ನಡೆದ 22ನೇ ಓಪನ್‌ ಇಂಟರ್‌ನ್ಯಾಷನಲ್‌ ಗ್ರ್ಯಾನ್‌ ಹೋಟೆಲ್ ಬಾಲಿ’ ಟೂರ್ನಿಯಲ್ಲಿ ಆಡಿದ್ದು, ಇದರಲ್ಲಿ ಮೊದಲ ಡಬ್ಲ್ಯುಐಎಂ ನಾರ್ಮ್ ಗಳಿಸಿದ್ದಾಳೆ. ಸರ್ಬಿಯಾದಲ್ಲಿ ಡಿಸೆಂಬರ್ 8 ರಿಂದ 16ರವರೆಗೆ ನಡೆಯಲಿರುವ ರೆಡನಿಕಿಚೆಸ್‌ ಐಎಂ ರೌಂಡ್‌ರಾಬಿನ್‌ ಟೂರ್ನಿಯಲ್ಲೂ ಆಡಲಿದ್ದಾಳೆ’ ಎಂದು ಈಕೆಯ ತಂದೆ ಅನಿಲ್‌ ಕುಮಾರ್ ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು. ಅನಿಲ್‌ ಕುಮಾರ್ ಅವರು ಎಚ್‌ಪಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದಾರೆ.

ಚೆಸ್‌ಗೆ ಹೆಸರಾಗಿರುವ ಚೆನ್ನೈನ ವೇಲಮ್ಮಾಳ್‌ ಶಾಲೆಗೆ ಚಾರ್ವಿ ಈ ವರ್ಷ ದಾಖಲಾಗಿದ್ದಾಳೆ.

ADVERTISEMENT

ಚಾರ್ವಿ ಸಾಧನೆ: 

ಹಂಗೆರಿಯ ದಿಗ್ಗಜ ಆಟಗಾರ್ತಿ ಜುಡಿತ್‌ ಪೋಲ್ಗಾರ್‌ ಅವರನ್ನು ಬಿಟ್ಟರೆ 2300 ಇಎಲ್‌ಒ ರೇಟಿಂಗ್ ಪಡೆದ ವಿಶ್ವದ ಅತಿ ಕಿರಿಯ ಆಟಗಾರ್ತಿ ಎಂಬ ಶ್ರೇಯಸ್ಸಿಗೆ ಚಾರ್ವಿ ಪಾತ್ರಳಾಗಿದ್ದಳು. ಪ್ರಸ್ತುತ 11 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿಯಾಗಿದ್ದಾಳೆ. 

ಚಾರ್ವಿಯ ಸಾಧನೆ ಗುರುತಿಸಿ, ದೇಶದ ಪ್ರಮುಖ ಚೆಸ್‌ ತರಬೇತುದಾರ ಆರ್‌.ಬಿ.ರಮೇಶ್‌ ಎಕ್ಸ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದರು. ಚಾರ್ವಿ ಪ್ರಸ್ತುತ 2331ರ ಲೈವ್‌ ರೇಟಿಂಗ್‌ನಲ್ಲಿ ಆಡುತ್ತಿದ್ದಾಳೆ.

ವಿಶ್ವ ರ್‍ಯಾಪಿಡ್‌ ಟೂರ್ನಿಗೆ ಆಯ್ಕೆ:
ದೋಹಾದಲ್ಲಿ ಇದೇ ತಿಂಗಳ 25ರಿಂದ 31ರವರೆಗೆ ನಡೆಯಲಿರುವ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ಚಾರ್ವಿ ಪಾಲ್ಗೊಳ್ಳಲಿದ್ದು, ಭಾರತದಿಂದ ಪಾಲ್ಗೊಳ್ಳುತ್ತಿರುವ ಅತಿ ಕಿರಿಯ ಆಟಗಾರ್ತಿಯಾಗಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.