ADVERTISEMENT

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ: ಪ್ರಶಸ್ತಿ ಖಚಿತಪಡಿಸಿಕೊಂಡ ಕೀಮರ್

ಪಿಟಿಐ
Published 14 ಆಗಸ್ಟ್ 2025, 23:32 IST
Last Updated 14 ಆಗಸ್ಟ್ 2025, 23:32 IST
ವಿನ್ಸೆಂಟ್‌ ಕೀಮರ್‌
ವಿನ್ಸೆಂಟ್‌ ಕೀಮರ್‌   

ಚೆನ್ನೈ : ಇನ್ನೂ ಒಂದು ಸುತ್ತು ಬಾಕಿಯಿರುವಂತೆ ಗ್ರ್ಯಾಂಡ್‌ಮಾಸ್ಟರ್‌ ವಿನ್ಸೆಂಟ್‌ ಕೀಮರ್ ಅವರು ಚೆನ್ನೈ ಗ್ರ್ಯಾಂಡ್‌ಮಾ‌ಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅವರು ಗುರುವಾರ ನಡೆದ ಎಂಟನೇ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಆಟಗಾರ ಜೋರ್ಡನ್ ವಾನ್ ಫೋರಿಸ್ಟ್‌ ಜೊತೆ ಡ್ರಾ ಮಾಡಿಕೊಂಡರು.

ಜರ್ಮನಿಯ ಆಟಗಾರ ಆರು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಜಂಟಿ ಎರಡನೇ ಸ್ಥಾನದಲ್ಲಿರುವ ಅಗ್ರ ಶ್ರೇಯಾಂಕದ ಅರ್ಜುನ್‌ ಇರಿಗೇಶಿ ಮತ್ತು ಕಾರ್ತಿಕೇಯನ್ ಮುರಳಿ ಅವರು ತಲಾ 4.5 ಪಾಯಿಂಟ್ಸ್ ಗಳಿಸಿದ್ದಾರೆ. ಹೀಗಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಪೈಪೋಟಿಯಿದೆ. ವಿಶೇಷ ಎಂದರೆ ಮಾಸ್ಟರ್ಸ್‌ ವಿಭಾಗದ ಎಂಟನೇ ಸುತ್ತಿನಲ್ಲಿ ಎಲ್ಲ ಐದೂ ಪಂದ್ಯಗಳು ಡ್ರಾ ಆದವು.

ಅರ್ಜುನ್ ಇರಿಗೇಶಿ, ಸ್ವದೇಶದ ವಿದಿತ್‌ ಎಸ್‌.ಗುಜರಾತಿ (3.5) ಜೊತೆ ಅಂಕ ಹಂಚಿಕೊಂಡರೆ, ಕಾರ್ತಿಕೇಯನ್ ಮುರಳಿ, ಸ್ವದೇಶದ ನಿಹಾಲ್ ಸರಿನ್ (3.5) ಜೊತೆ ಡ್ರಾ ಮಾಡಿಕೊಂಡರು. ನೆದರ್ಲೆಂಡ್ಸ್‌ನ ಅನಿಶ್ ಗಿರಿ (4) ಮತ್ತು ಅವಾಂಡರ್ ಲಿಯಾಂಗ್ (4) ಡುವಣ ಪಂದ್ಯವೂ ಇದೇ ಹಾದಿ ಹಿಡಿಯಿತು. ವಿ.ಪ್ರಣವ್ (3) ಮತ್ತು ರೇ ರಾಬ್ಸನ್ (3) ಪಂದ್ಯದಲ್ಲೂ ನಿರ್ಣಾಯಕ ಫಲಿತಾಂಶ ಬರಲಿಲ್ಲ.

ADVERTISEMENT

ಇಲ್ಲಿ ತೋರಿದ ಉತ್ತಮ ಪ್ರದರ್ಶನದ ಪರಿಣಾಮ ಕೀಮರ್ ಅವರು ಲೈವ್‌ ರೇಟಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದರು. ಇಲ್ಲಿ ವಿಜೇತರಾಗಿದ್ದಕ್ಕೆ ಅವರು ಟ್ರೋಫಿ ಜೊತೆ ₹25 ಲಕ್ಷ ಬಹುಮಾನ ಪಡೆಯಲಿದ್ದಾರೆ.

ಪ್ರಶಸ್ತಿಯತ್ತ ಪ್ರಾಣೇಶ್

ಚಾಲೆಂಜರ್ಸ್ ವಿಭಾಗದಲ್ಲಿ ತಮಿಳುನಾಡಿನ ಪ್ರಾಣೇಶ್ ಎಂ ಅವರು ದ್ರೋಣವಲ್ಲಿ ಹಾರಿಕಾ ಅವರನ್ನು ಸೋಲಿಸಿ 6.5 ಪಾಯಿಂಟ್‌ಗಳೊಡನೆ ಅಗ್ರಸ್ಥಾನಕ್ಕೇರಿದರು. ಇ್ನೊಂದು ಸುತ್ತು ಬಾಕಿ ಉಳಿದಿದೆ.

ಅಭಿಮನ್ಯು ಪುರಾಣಿಕ್ ಮತ್ತು ಲಿಯಾನ್ ಲ್ಯೂಕ್ ಮೆಂಡೋನ್ಸಾ (ತಲಾ 6) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅಧಿಬನ್ ಭಾಸ್ಕರನ್ (5) ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಿ.ಇನಿಯನ್ (4.5) ಐದನೇ ಸ್ಥಾನದಲ್ಲಿದ್ದಾರೆ. ಇಲ್ಲೂ 10 ಆಟಗಾರರು ಕಣದಲ್ಲಿದ್ದಾರೆ.

ಮೊದಲ ಕೆಲವು ಸುತ್ತುಗಳಲ್ಲಿ ಪಡೆದ ಗೆಲುವುಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಏಕಾಗ್ರತೆ ಮೂಡಿಸಲು ನೆರವಾದವು
ವಿನ್ಸೆಂಟ್ ಕೀಮರ್ ಜರ್ಮನಿಯ ಗ್ರ್ಯಾಂಡ್‌ಮಾಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.