
ಟಾಟಾ ಸ್ಟೀಸ್ ಕೋಲ್ಕತ್ತ 25ಕೆ ಓಟದ ವಿಜೇತರು: (ಎಡದಿಂದ) ಕಂಚಿನ ಪದಕ ಗೆದ್ದ ಲೆಸೊತೊದ ತೆಬೆಲ್ಲೊ ರಾಮಕೊಂಗಾನ, ಚಿನ್ನ ಗೆದ್ದ ಯುಗಾಂಡಾದ ಜೋಶುವಾ ಚೆಪ್ಟೇಗಿ ಮತ್ತು ಬೆಳ್ಳಿ ಗೆದ್ದ ತಾಂಜಾನಿಯಾದ ಅಲ್ಫೋಮ್ಸ್ ಫೆಲಿಕ್ಸ್ ಸಿಯುಂಬು. ಪಿಟಿಐ ಚಿತ್ರ
ಕೋಲ್ಕತ್ತ: ಯುಗಾಂಡಾದ ಜೋಶುವ ಚೆಪ್ಟೇಗಿ ಅವರು ಕೋಲ್ಕತ್ತದಲ್ಲಿ ಭಾನುವಾರ ನಡೆದ ಟಾಟಾ ಸ್ಟೀಲ್ ವಿಶ್ವ 25ಕೆ (25 ಕಿ.ಮೀ.) ಓಟವನ್ನು ಗೆಲ್ಲುವ ಮೂಲಕ ದೂರ ಓಟದ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಭಾರತದ ಗುಲ್ವೀರ್ ಸಿಂಗ್ ಮತ್ತು ಸೀಮಾ ಅವರು ತಮ್ಮ ಎಲೀಟ್ ವಿಭಾಗಗಳಲ್ಲಿ ದಾಖಲೆಯನ್ನು ಸುಧಾರಿಸಿದರು.
ಇಥಿಯೋಪಿಯಾದ ದೆಗಿಟು ಅಝಿಮೆರಾ ಅವರು ಅಮೋಘ ಓಟ ಓಡಿ ಹಾಲಿ ಚಾಂಪಿಯನ್, ಸ್ವದೇಶದ ಸುತುಮೆ ಅಸೇಫಾ ಕೆಬೆಡೆ ಅವರನ್ನು ಹಿಂದೆಹಾಕಿ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಚೆಪ್ಟೇಗಿ ತಮ್ಮ ರೇಸ್‌ಅನ್ನು 1 ಗಂಟೆ 11 ನಿ. 49 ಸೆ.ಗಳಲ್ಲಿ ಪೂರೈಸಿ ಅಗ್ರಸ್ಥಾನ ಪಡೆದರು. ಯಾವ ಹಂತದಲ್ಲೂ ಅವರು ನಿಯಂತ್ರಣ ಕಳೆದುಕೊಳ್ಳಲಿಲ್ಲ. ಎರಡನೇ ಸ್ಥಾನ ಪಡೆದ ತಾಂಜಾನಿಯಾದ ಅಲ್ಫೋನ್ಸ್ ಫೆಲಿಕ್ಸ್ ಸಿಯುಂಬು (1:11:56) ಮತ್ತು ಮೂರನೇ ಸ್ಥಾನ ಗಳಿಸಿದ ಲೆಸೊತೊದ ತೆಬೆಲ್ಲೊ ರಾಮಕೊಂಗೊನಾ (1:11:59) ನಡುವೆ ಪೈಪೋಟಿ ತೀವ್ರವಾಗಿತ್ತು.
ಅಝಿಮೆರಾ ಸಹ ಆರಂಭದಿಂದ ಕೊನೆಯವರೆಗೆ ಮುನ್ನಡೆ ಕಾಪಾಡಿಕೊಂಡು 1:19:36 ಅವಧಿಯೊಡನೆ ಮಹಿಳೆಯರ ವಿಭಾಗದಲ್ಲಿ ಜಯಶಾಲಿಯಾದರು. ಸುತುಮೆ (1:20:28) ಎರಡನೇ ಸ್ಥಾನ ಗಳಿಸಿದರೆ, ಮೆಸೆಲೆಚ್ ಅಲೆಮಯೆಹು (1:20:48) ಮೂರನೇ ಸ್ಥಾನ ಪಡೆದರು. ಈ ಮೂವರೂ ಇಥಿಯೋಪಿಯಾದವರು ಎಂಬುದು ವಿಶೇಷ.
ಎಲೀಟ್ ರೇಸ್‌ನಲ್ಲಿ ಭಾರತೀಯ ಓಟಗಾರರ ಪೈಕಿ ಗುಲ್ವೀರ್ ಅವರು 1:12:06 ಸೆ.ಗಳಲ್ಲಿ ಗುರಿ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.