ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ನಾಲ್ಕನೇ ಪಂದ್ಯ: ಡ್ರಾ ಮಾಡಿಕೊಂಡ ಲಿರೆನ್‌–ಗುಕೇಶ್

ಪಿಟಿಐ
Published 29 ನವೆಂಬರ್ 2024, 14:47 IST
Last Updated 29 ನವೆಂಬರ್ 2024, 14:47 IST
ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು ನಾಲ್ಕನೇ ಪಂದ್ಯದ ಆರಂಭದ ಸಂದರ್ಭದಲ್ಲಿ ಗುಕೇಶ್ ಪರ ‘ಔಪಚಾರಿಕ’ ನಡೆ ಇರಿಸಿದರು.
ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು ನಾಲ್ಕನೇ ಪಂದ್ಯದ ಆರಂಭದ ಸಂದರ್ಭದಲ್ಲಿ ಗುಕೇಶ್ ಪರ ‘ಔಪಚಾರಿಕ’ ನಡೆ ಇರಿಸಿದರು.   

ಸಿಂಗಪುರ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಮತ್ತು ಹಾಲಿ ಚಾಂಪಿಯನ್ ಡಿಂಗ್ ಲಿರೆನ್‌ ನಡುವಣ ವಿಶ್ವ ಚಾಂಪಿಯನ್‌ಷಿಪ್‌ನ ನಾಲ್ಕನೇ ಪಂದ್ಯ ಹೆಚ್ಚು ರಿಸ್ಕ್‌ಗಳಿಂದ ಕೂಡಿರಲಿಲ್ಲ. ಶುಕ್ರವಾರ ನಡೆದ ಈ ಪಂದ್ಯ 42 ನಡೆಗಳ ನಂತರ ಡ್ರಾ ಆಯಿತು.

ಇಬ್ಬರ ಕಡೆಯೂ ಸಮಾನ ಬಲವಿದ್ದು, ನಡೆಗಳ ಪುನರಾವರ್ತನೆಯಿಂದ ಡ್ರಾ ಆಯಿತು. ಆಗ ಇಬ್ಬರ ಬಳಿಯೂ ತಲಾ ಒಂದು ರೂಕ್‌, ಮೂರು ಪಾನ್ಸ್‌ (ಕಾಲಾಳುಗಳು) ಉಳಿದಿದ್ದವು. ಈ ಪಂದ್ಯದಲ್ಲಿ ಗುಕೇಶ್ ಕಪ್ಪು ಕಾಯಿಗಳಲ್ಲಿ ಆಡಿದ್ದರು.

ನಾಲ್ಕು ಪಂದ್ಯಗಳ ಬಳಿಕ ಸ್ಕೋರ್ 2–2 ಸಮಬಲಗೊಂಡಿದೆ. ಇನ್ನೂ 10 ಪಂದ್ಯಗಳು ಉಳಿದಿವೆ. ಮೊದಲು 7.5 ಪಾಯಿಂಟ್ಸ್ ತಲುಪಿದ ಆಟಗಾರ ಚಾಂಪಿಯನ್ ಕಿರೀಟ ಧರಿಸಲಿದ್ದಾರೆ. ಸ್ಕೋರ್ (7–7) ಸಮನಾದಲ್ಲಿ ಟೈಬ್ರೇಕ್‌ ಪಂದ್ಯಗಳನ್ನು ಆಡಿಸಲಾಗುತ್ತದೆ.

ADVERTISEMENT

18 ವರ್ಷ ವಯಸ್ಸಿನ ಗುಕೇಶ್, ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲೇ ಅತಿ ಕಿರಿಯ ಚಾಲೆಂಜರ್ ಎನಿಸಿದ್ದಾರೆ.

‘ಕೊನೆಯ ಹಂತದಲ್ಲಿ ನನಗೆ ಒತ್ತಡ ಹೇರಲು ಅಲ್ಪಸ್ವಲ್ಪ ಅವಕಾಶವಿತ್ತು. ಆದರೆ ಕಪ್ಪು ಕಾಯಿಗಳಲ್ಲಿ ಆಡಿ ಹೆಚ್ಚಿನದೇನನೂ ನಿರೀಕ್ಷಿಸಲಾಗದು’ ಎಂದು ಗುಕೇಶ್ ಪಂದ್ಯದ ಬಳಿಕ ಹೇಳಿದರು.

ಅತಿ ಕಿರಿಯ ಚಾಂಪಿಯನ್ ಆಗುವ ಸಂಭವದ ಕುರಿತು ಕೇಳಿದಾಗ, ‘ನಾನು ಒಳ್ಳೆಯ ನಡೆಗಳನ್ನಿರಿಸಲಷ್ಟೇ ಪ್ರಯತ್ನಿಸುತ್ತಿದ್ದೇನೆ’ ಎಂದಷ್ಟೇ ಉತ್ತರಿಸಿದರು.

ಚೀನಾದ ಆಟಗಾರ ಲಿರೆನ್‌ ಮೊದಲ ಪಂದ್ಯ ಗೆದ್ದರೆ, ಗುಕೇಶ್ ಮೂರನೇ ಪಂದ್ಯದಲ್ಲಿ ಜಯಗಳಿಸಿದ್ದರು.

‘ಈ ಸುತ್ತಿನಲ್ಲಿ ನಾನು ಸುರಕ್ಷಿತ ಆಟವಾಡಲು ಯತ್ನಿಸಿದೆ. ನನಗೆ ಸ್ವಲ್ಪ ಅನುಕೂಲಕರ ಪರಿಸ್ಥಿತಿಯಿತ್ತು. ಸ್ಕೋರ್ ಈಗ ಸಮಬಲದಲ್ಲಿದೆ. ಇನ್ನೂ ಸಾಕಷ್ಟು ಪಂದ್ಯಗಳು ಆಡಲು ಇವೆ’ ಎಂದು 32 ವರ್ಷ ವಯಸ್ಸಿನ ಲಿರೆನ್ ಪ್ರತಿಕ್ರಿಯಿಸಿದರು.

ವಿಶ್ವನಾಥನ್ ಆನಂದ್ ಮಾತ್ರ ಭಾರತದಿಂದ ವಿಶ್ವ ಚಾಂಪಿಯನ್ ಆದ ಏಕಮಾತ್ರ ಆಟಗಾರ. ಆನಂದ್ ಈಗ ಕೆಲವೇ ಕೆಲವು ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಭಾಗಶಃ ನಿವೃತ್ತರಾದ ಈ ದಿಗ್ಗಜ ಆಟಗಾರ ಶುಕ್ರವಾರ ಪಂದ್ಯದಲ್ಲಿ ಗುಕೇಶ್ ಪರ ‘ಔಪಚಾರದ ಮೊದಲ ನಡೆ’ ಇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.