ಪಣಜಿ (ಪಿಟಿಐ): ವಿಶ್ವ ಚಾಂಪಿಯುನ್ ಡಿ.ಗುಕೇಶ್ ಅವರು ವಿಶ್ವ ಕಪ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಜರ್ಮನಿಯ ಫ್ರೆಡರಿಕ್ ಸ್ವೇನ್ ಅವರು 1.5–0.5 ರಿಂದ ಅಗ್ರ ಶ್ರೇಯಾಂಕದ ಗುಕೇಶ್ ಅವರನ್ನು ಸೋಲಿಸಿ 32ರ ಸುತ್ತಿಗೆ ಮುನ್ನಡೆದರು. ಆದರೆ ಎರಡನೇ ಶ್ರೇಯಾಂಕದ ಅರ್ಜುನ್ ಇರಿಗೇಶಿ, ಮೂರನೇ ಶ್ರೇಯಾಂಕದ ಪ್ರಜ್ಞಾನಂದ ಆರ್. ಅವರು ನಾಲ್ಕನೇ ಸುತ್ತಿಗೆ ಮುನ್ನಡೆದರು.
ಭಾರತದ ಅನುಭವಿ ಆಟಗಾರ ಪೆಂಟಾಲ ಹರಿಕೃಷ್ಣ, ವಿಶ್ವ ಜೂನಿಯರ್ ಚಾಂಪಿಯನ್ ವಿ. ಪ್ರಣವ್ ಅವರೂ 32ರ ಸುತ್ತನ್ನು ಪ್ರವೇಶಿಸಿದರು. ಗ್ರ್ಯಾಂಡ್‌ಮಾಸ್ಟರ್ ಹರಿಕೃಷ್ಣ ಅವರು 1.5–0.5 ರಿಂದ ಬೆಲ್ಜಿಯಂನ ಡೇನಿಯನ್ ದರ್ಧಾ ಅವರನ್ನು ಸೋಲಿಸಿದರು. ಪ್ರಣವ್ ಇನ್ನೊಂದು ಪಂದ್ಯದಲ್ಲಿ ಲಿಥುವೇನಿಯಾದ ತಿತಾಸ್ ಸ್ಟ್ರೆಮಾವಿಸಿಯಸ್ ಅವರನ್ನು 1.5–0.5 ರಿಂದ ಮಣಿಸಿದರು.
ಶುಕ್ರವಾರ ಮೊದಲ ಕ್ಲಾಸಿಕಲ್ ಆಟ ಡ್ರಾ ಮಾಡಿಕೊಂಡಿದ್ದ ಗುಕೇಶ್ ಮರು ಆಟದಲ್ಲಿ ಪ್ರಬಲ ಹೋರಾಟಕ್ಕೆ ಹೆಸರಾದ ಸ್ವೇನ್ ಎದುರು ಸೋತು ಹೊರಬಿದ್ದರು.
ಉಜ್ಬೇಕಿಸ್ತಾನದ ಸಂಸಿದ್ದೀನ್ ವಾಖಿಡೋವ್ ವಿರುದ್ಧ ಮೊದಲ ಆಟದಲ್ಲಿ ಗೆದ್ದಿದ್ದ ಅರ್ಜುನ್ ಇರಿಗೇಶಿ, ಮರು ಆಟವನ್ನು ಡ್ರಾ ಮಾಡಿಕೊಂಡು 1.5–0.5ರಲ್ಲಿ ಗೆದ್ದರು. ಅರ್ಮೇನಿಯಾದ ರಾಬರ್ಟ್ ಹೊವೆನೀಸಿಯನ್ ಎದುರು ಶುಕ್ರವಾರ ಡ್ರಾ ಮಾಡಿದ್ದ ಪ್ರಜ್ಞಾನಂದ, ಶನಿವಾರ ಮರು ಆಟದಲ್ಲಿ ಜಯಗಳಿಸಿದರು.
ಇದರೊಂದಿಗೆ ಭಾರತದ ನಾಲ್ವರು ಎರಡನೇ ದಿನವೇ ನಾಲ್ಕನೇ ಸುತ್ತನ್ನು ಖಚಿತಪಡಿಸಿದಂತಾಯಿತು. ಗುಕೇಶ್ ಜೊತೆಗೆ ಪ್ರಾಣೇಶ್ ಎಂ. ಮತ್ತು ದೀಪ್ತಾಯನ ಘೋಷ್ ಅವರೂ ಹೊರಬಿದ್ದರು. ಜರ್ಮನಿಯ ವಿನ್ಸೆಂಟ್ ಕೀಮರ್ 1.5–0.5 ರಿಂದ ಅವರನ್ನು ಸೋಲಿಸಿದರೆ, ಅರ್ಮೇನಿಯಾದ ಗೇಬ್ರಿಯಲ್ ಸೆರ್ಗೆಸಿಯನ್ ಇದೇ ಅಂತರದಿಂದ ದೀಪ್ತಾಯನ ಅವರನ್ನು ಹೊರದೂಡಿದರು.
ಎಸ್.ನಾರಾಯಣನ್, ಕಾರ್ತಿಕ್ ವೆಂಕಟರಾಮನ್, ವಿದಿತ್ ಗುಜರಾತಿ ಅವರು ತಮ್ಮ ಎದುರಾಳಿಗಳ ವಿರುದ್ಧ (ಕ್ರಮವಾಗಿ 1–1 ಸಮಬಲ ಸಾಧಿಸಿದ್ದು, ಮುಂದಿನ ಸುತ್ತಿಗೆ ಹೋಗಬೇಕಾದರೆ ಭಾನುವಾರ ನಡೆಯುವ ಟೈಬ್ರೇಕರ್ ಸುತ್ತನ್ನು ಗೆಲ್ಲಬೇಕಾಗಿದೆ.
ಅನೀಶ್‌ಗೆ ಸೋಲು: ನೆದರ್ಲೆಂಡ್ಸ್‌ನ ಅನೀಶ್ ಗಿರಿ, ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಡೊನಚೆಂಕೊ (ಜರ್ಮನಿ) ಎದುರು 0.5–1.5 ರಿಂದ ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.