ADVERTISEMENT

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ

ಪಿಟಿಐ
Published 23 ಅಕ್ಟೋಬರ್ 2025, 14:39 IST
Last Updated 23 ಅಕ್ಟೋಬರ್ 2025, 14:39 IST
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ 
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ    

ಪ್ಯಾರಿಸ್‌: ಭಾರತದ ಅಗ್ರಮಾನ್ಯ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು. 

ಪುರುಷರ ಡಬಲ್ಸ್‌ ವಿಭಾಗದ 32ರ ಘಟ್ಟದ ಪಂದ್ಯದಲ್ಲಿ ಭಾರತದ ಜೋಡಿಯು 18-21, 20-22ರಿಂದ ಇಂಡೊನೇಷ್ಯಾದ ಮುಹಮ್ಮದ್‌ ರಿಯಾನ್‌ ಅರ್ಡಿಯಾಂಟೊ– ರಹಮತ್‌ ಹಿದಾಯತ್‌ ಅವರಿಗೆ ಬುಧವಾರ ಮಣಿದರು. 2022 ಮತ್ತು 2024ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಸಾತ್ವಿಕ್‌–ಚಿರಾಗ್‌ ಜೋಡಿಗೆ ಆರಂಭಿಕ ಸುತ್ತು ದಾಟಲು ಸಾಧ್ಯವಾಗಲಿಲ್ಲ.

ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದರು. 18 ವರ್ಷದ ಹೂಡಾ 14–21, 11–21ರಿಂದ ಅಗ್ರ ಶ್ರೇಯಾಂಕದ ವಾಂಗ್ ಝಿಯಿ (ಚೀನಾ) ಅವರಿಗೆ ಸೋತರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಹೋರಾಟಕ್ಕೂ ತೆರೆಬಿತ್ತು.

ADVERTISEMENT

ಇದಕ್ಕೂ ಮೊದಲು ಹೂಡಾ 11-21, 21-13, 21-16ರಿಂದ ಮಲೇಷ್ಯಾದ ಲೆಟ್ಶಾನಾ ಕರುಪತೇವನ್ ಅವರನ್ನು ಹಿಮ್ಮೆಟ್ಟಿಸಿದರು. ಭಾರತದ ಅನುಪಮಾ ಉಪಾಧ್ಯಾಯ ಮತ್ತು ಅನ್ಮೋಲ್ ಖಾರ್ಬ್ ಅವರೂ ನಿರಾಸೆ ಮೂಡಿಸಿದರು. ಅನುಪಮಾ 15-21, 11-21ರಿಂದ ಚೀನಾದ ಹಾನ್ ಯುಯೆ ವಿರುದ್ಧ; ಖಾರ್ಬ್‌ 15-21, 9-21ರಿಂದ ದಕ್ಷಿಣ ಕೊರಿಯಾದ ಆನ್ ಸೆ-ಯಂಗ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತು ಹೊರನಡೆದರು. 

ಕರ್ನಾಟಕದ ಆಯುಷ್‌ ಶೆಟ್ಟಿ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ 19-21, 19-21 ರಿಂದ ಜಪಾನ್‌ನ ಕೋಕಿ ವತಾನಬೆ ವಿರುದ್ಧ ಸೋಲುಂಡರು. ಭಾರತದ ಅನುಭವಿ ಆಟಗಾರ ಲಕ್ಷ್ಯ ಸೇನ್‌ ಮಂಗಳವಾರ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.