
ಬೆಂಗಳೂರು: ಚಿತ್ರದುರ್ಗ ಕ್ವೀನ್ಸ್ ಹಾಗೂ ಹಾಸನ ಕ್ವೀನ್ಸ್ ತಂಡಗಳು ಎರಡನೇ ಆವೃತ್ತಿಯ ಕ್ವೀನ್ಸ್ ಪ್ರೀಮಿಯರ್ ಲೀಗ್ (ಕ್ಯೂಪಿಎಲ್) ಕ್ರೀಡೋತ್ಸವದ ಲುಡೊ ಸ್ಪರ್ಧೆಯಲ್ಲಿ ಬುಧವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದವು.
ನಗರದ ಕೋರಮಂಗಲದಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕೇರಂ ಸ್ಪರ್ಧೆಯಲ್ಲಿ ಮೈಸೂರು ಕ್ವೀನ್ಸ್ ಮತ್ತು ಹಾಸನ ಕ್ವೀನ್ಸ್ ತಂಡಗಳು ಫೈನಲ್ ಪ್ರವೇಶಿಸಿದವು. ಈ ಹಾದಿಯಲ್ಲಿ ಉಭಯ ತಂಡಗಳು ಲೀಗ್ ಮತ್ತು ನಾಕೌಟ್ ಹಂತಗಳಲ್ಲಿ ತುರುಸಿನ ಸ್ಪರ್ಧೆ ಎದುರಿಸಿದವು.
ಹಿರಿಯ ನಟಿಯರಾದ ಪ್ರೇಮಾ ಹಾಗೂ ಸುಧಾರಾಣಿ ಅವರು ಬುಧವಾರದ ಪಂದ್ಯಗಳಿಗೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಹುರಿದುಂಬಿಸಿದರು. ಫಿಬಾ ಏಷ್ಯಾ ಹಾಗೂ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದರು. ಸಿನಿ ತಾರೆಯರಲ್ಲಿ ಒಟ್ಟುಗೆಲಸ (ಟೀಂ ವರ್ಕ್) ಹಾಗೂ ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಟೂರ್ನಿಯು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಚೆಸ್ ಹಾಗೂ ಲಗೋರಿ ಸ್ಪರ್ಧೆಗಳು ಗುರುವಾರ ನಡೆಯಲಿವೆ.
ನಗರದ ಮಾರತ್ತಹಳ್ಳಿಯ ಇ–ಝೋನ್‌ನಲ್ಲಿ ಮಂಗಳವಾರ ನಡೆದ ಲೇಸರ್ ಟ್ಯಾಗ್ ಹಾಗೂ ಬೌಲಿಂಗ್ ಸ್ಪರ್ಧೆಗಳಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕತ್ವದ ಬಳ್ಳಾರಿ ಕ್ವೀನ್ಸ್ ತಂಡವು ಚಾಂಪಿಯನ್ ಆಗಿತ್ತು.
ಸಿನಿ ತಾರೆಯರ ನಾಯಕತ್ವದ 10 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಒಟ್ಟು 12 ವಿಧದ ಆಟಗಳನ್ನು ಆಡಿಸಲಾಗುತ್ತಿದ್ದು, ಪಂದ್ಯಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.