ADVERTISEMENT

ಏಷ್ಯಾಡ್‌ನಲ್ಲಿ ಗೆದ್ದ ನೀರಜ್‌ ಮತ್ತೊಂದು ಲೀಗ್‌ಗಾಗಿ ಸ್ವಿಡ್ಜರ್‌ಲೆಂಡ್‌ಗೆ ಪಯಣ

ಪಿಟಿಐ
Published 28 ಆಗಸ್ಟ್ 2018, 20:03 IST
Last Updated 28 ಆಗಸ್ಟ್ 2018, 20:03 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ಜಕಾರ್ತ: ಭಾರತದ ಅಥ್ಲೀಟ್‌ ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್‌ ಫೈನಲ್‌ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಲು ಮಂಗಳವಾರ ಜ್ಯುರಿಚ್‌ಗೆ ತೆರಳಿದರು.

ಸೋಮವಾರವಷ್ಟೇ ಏಷ್ಯನ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋನಲ್ಲಿ ನೀರಜ್‌ ಅವರು ಚಿನ್ನದ ಸಾಧನೆ ಮಾಡಿದ್ದರು. ಅವರು 88.06 ಮೀಟರ್ಸ್‌ ದೂರ ಜಾವೆಲಿನ್‌ ಎಸೆದಿದ್ದರು.

ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್‌ ಅಥ್ಲೆಟಿಕ್ಸ್‌ ಗುರುವಾರದಿಂದ ಆರಂಭವಾಗಲಿದೆ.ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳು ಸ್ಪರ್ಧಿಸುವ ಈ ಕ್ರೀಡಾಕೂಟದಲ್ಲಿ ನೀರಜ್‌ ಅವರು ಪ್ರಬಲ ಸ್ಪರ್ಧೆ ಎದುರಿಸಲಿದ್ದಾರೆ.

ADVERTISEMENT

ಒಟ್ಟು ಎಂಟು ಮಂದಿ ಅಥ್ಲೀಟ್‌ಗಳು ಜಾವೆಲಿನ್‌ ಥ್ರೋನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಜರ್ಮನಿಯ ಒಲಿಂಪಿಕ್‌ ಚಾಂಪಿಯನ್‌ ಥಾಮಸ್‌ ರೋಹ್ಲರ್‌ ಅವರು ಹಣಾಹಣಿಯಲಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಹಿಂದಿನ ವರ್ಷ ಚಿನ್ನದ ಪದಕ ಜಯಿಸಿದ್ದ ಜೆಕ್‌ ರಿಪಬ್ಲಿಕ್‌ನ ಜಾಕುಬ್‌ ವಡ್ಲೆಚ್‌ ಅವರು ಕಣದಲ್ಲಿದ್ದಾರೆ. ಈ ಋತುವಿನಲ್ಲಿ 92.06 ಮೀಟರ್ಸ್‌ ದೂರ ಜಾವೆಲಿನ್‌ ಎಸೆದ ಜರ್ಮನಿಯ ಆ್ಯಂಡ್ರಿಯಾಸ್‌ ಹಾಫ್‌ಮನ್‌ ಅವರೂ ಸ್ಪರ್ಧಿಸಲಿದ್ದಾರೆ.

ಮುಂದಿನ ತಿಂಗಳು ನಡೆಯುವ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ (ಐಎಎಎಫ್‌)ನ ಕಾಂಟಿನೆಂಟ್‌ ಕಪ್‌ನಲ್ಲೂ ಸ್ಪರ್ಧಿಸಲಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಭಾರತದ ಮೊಹಮ್ಮದ್‌ ಅನಾಸ್‌ (400 ಮೀಟರ್ಸ್‌), ಜಿನ್ಸನ್‌ ಜಾನ್ಸನ್‌ (800 ಮೀಟರ್ಸ್‌), ಅರ್ಪಿಂದರ್‌ ಸಿಂಗ್‌ (ಟ್ರಿಪಲ್‌ ಜಂಪ್‌), ಹಿಮಾ ದಾಸ್‌ (400 ಮೀಟರ್ಸ್‌), ಪಿ. ಯು. ಚಿತ್ರಾ (1500 ಮೀಟರ್ಸ್‌), ಸುಧಾ ಸಿಂಗ್‌ (3000 ಮೀಟರ್ಸ್‌ ಸ್ಟೀಪಲ್‌ಚೇಸ್‌) ಅವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.