
ಎಂಟು ವಿಕೆಟ್ ಪಡೆದ ಕರ್ನಾಟಕದ ಮೊಹ್ಸಿನ್ ಖಾನ್ ಪಡೆದರು
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಕರ್ನಾಟಕದ ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ ಅವರು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಚಂಡೀಗಡ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್ ಗಳಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿ ದಾಖಲಾಯಿತು. ಮೊಹ್ಸಿನ್ ಖಾನ್ ಅವರು ಪ್ರಸಕ್ತ ಋತುವಿನ ರಣಜಿ ಟ್ರೋಫಿಯ ಮೊದಲ ಹಂತದಲ್ಲಿ 12 ವಿಕೆಟ್ ಪಡೆದಿದ್ದರು.
ಆಲೂರು ಕೆಎಸ್‌ಸಿಎ ಕ್ರೀಡಾಂಗಣ (3)ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ಚಂಡೀಗಢ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 55 ರನ್ ಗಳಿಸಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಲು ಇನ್ನೂ 296 ರನ್ ಬೇಕಿದೆ. ಕೊನೆಯ ದಿನದ ಆಟ ಕುತೂಹಲ ಕೆರಳಿಸಿದ್ದು, ಕರ್ನಾಟಕದ ಗೆಲುವು ಏಳು ವಿಕೆಟ್ ದೂರದಲ್ಲಿದೆ.
ಮೂರು ವಿಕೆಟ್‌ಗೆ 98 ರನ್‌ಗಳೊಂದಿಗೆ ದಿನದ ಆಟ ಆರಂಭಿಸಿದ ಚಂಡೀಗಢ ತಂಡವನ್ನು ಮೊಹ್ಸಿನ್ (114ಕ್ಕೆ 8) ಇನ್ನಿಲ್ಲದಂತೆ ಕಾಡಿದರು. ಇಬ್ಬರು ಬ್ಯಾಟರ್‌ಗಳು ರನೌಟ್ ಆದರೆ, ಉಳಿದ ಎಂಟು ಮಂದಿಯೂ 22 ವರ್ಷದ ಮೊಹ್ಸಿನ್ ಅವರಿಗೆ ವಿಕೆಟ್ ಒಪ್ಪಿಸಿದ್ದು ವಿಶೇಷ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆರು ವಿಕೆಟ್ ಪಡೆದಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
ಚಂಡೀಗಢ ತಂಡದ ಆರಂಭದ ಆಟಗಾರ ದುಷ್ಯಂತ್ (59;79ಎ), ನಾಯಕ ಆರುಷ್ ಭಂಡಾರಿ (63;192ಎ) ಮತ್ತು ಅಧಿರಾಜ್ (ಔಟಾಗದೇ 64;77ಎ) ಮಾತ್ರ ಕೊಂಚ ಹೋರಾಟ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ 107 ಓವರ್‌ಗಳಲ್ಲಿ 283 ರನ್‌ಗಳಿಗೆ ಕುಸಿಯಿತು.
351 ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಎದುರಾಳಿ ತಂಡದ ಮೇಲೆ ಫಾಲೋಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿ 38 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಘವ ವರ್ಮಾ (ಔಟಾಗದೇ 17) ಮತ್ತು ಆಯುಷ್ ಭಂಡಾರಿ (ಔಟಾಗದೇ 8) ಕೊನೆಯ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ಮನ್ವಂತ್ ಕುಮಾರ್ ಎರಡು ವಿಕೆಟ್ ಪಡೆದರೆ, ಮೊಹ್ಸಿನ್ ಒಂದು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್: ಕರ್ನಾಟಕ: 138.2 ಓವರ್‌ಗಳಲ್ಲಿ 4 ವಿಕೆಟ್‌ಗೆ 634 ಡಿಕ್ಲೇರ್ಡ್. ಚಂಡೀಗಢ: 107 ಓವರ್‌ಗಳಲ್ಲಿ 283 (ದುಷ್ಯಂತ್ 59, ಆರುಷ್ ಭಂಡಾರಿ 63, ಅಧಿರಾಜ್ ಔಟಾಗದೇ 64; ಮೊಹ್ಸಿನ್ ಖಾನ್ 114ಕ್ಕೆ 8). ಎರಡನೇ ಇನಿಂಗ್ಸ್: ಚಂಡೀಗಢ: 28 ಓವರ್‌ಗಳಲ್ಲಿ 3 ವಿಕೆಟ್‌ಗೆ 55 (ಮನ್ವಂತ್ ಕುಮಾರ್ 29ಕ್ಕೆ 2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.