ADVERTISEMENT

ಕ್ಲಚ್‌ ಚೆಸ್‌ ಲೆಜೆಂಡ್ಸ್‌ ಪಂದ್ಯ: ಕ್ಯಾಸ್ಪರೋವ್‌ಗೆ ಮಣಿದ ಆನಂದ್

ಪಿಟಿಐ
Published 11 ಅಕ್ಟೋಬರ್ 2025, 13:19 IST
Last Updated 11 ಅಕ್ಟೋಬರ್ 2025, 13:19 IST
   

ಸೇಂಟ್‌ ಲೂಯಿ (ಅಮೆರಿಕ): ಸುಮಾರು 30 ವರ್ಷಗಳ ಹಿಂದಿನ ಇತಿಹಾಸ ಶನಿವಾರ ಮರುಕಳಿಸಿತು. ಮಾಜಿ ವಿಶ್ವ ಚಾಂಪಿಯನ್ನರ ನಡುವೆ ನಡೆದ ‘ಕ್ಲಚ್‌ ಚೆಸ್‌ ಲೆಜೆಂಡ್ಸ್‌ ಪಂದ್ಯಾವಳಿ’ಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿಯಿರುವಂತೆ ರಷ್ಯಾದ ದಿಗ್ಗಜ ಗ್ಯಾರಿ ಕ್ಯಾಸ್ಪರೋವ್ ಅವರು ಭಾರತದ ತಾರೆ ವಿಶ್ವನಾಥನ್ ಆನಂದ್ ಅವರನ್ನು 13–11 ರಿಂದ ಸೋಲಿಸಿದರು.

1995ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ 107ನೇ ಮಹಡಿಯಲ್ಲಿ ಇವರಿಬ್ಬರು ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್‌ ಆಡಿದ್ದರು. ಆ ವರ್ಷದ ಅಕ್ಟೋಬರ್ 10ರಂದು 18ನೇ ಗೇಮ್‌ನಲ್ಲಿ ಕ್ಯಾಸ್ಪರೋವ್‌ ನಿರ್ಣಾಯಕ ಜಯಗಳಿಸಿ ಚಾಂಪಿಯನ್ ಆಗಿದ್ದರು. ಸರಿಯಾಗಿ 30 ವರ್ಷಗಳ ನಂತರ, ಅಕ್ಟೋಬರ್ 10ರಂದು ‘ಲೆಜೆಂಡ್ಸ್‌ ಪಂದ್ಯಾವಳಿ’ಯಲ್ಲಿ ಕ್ಯಾಸ್ಪರೋವ್‌ ಮತ್ತೊಮ್ಮೆ ಭಾರತದ ದಿಗ್ಗಜ ಆಟಗಾರನನ್ನು ಸೋಲಿಸಿದರು.

ಈ ಗೆಲುವಿಗಾಗಿ ರಷ್ಯಾದ ಆಟಗಾರ ₹69 ಲಕ್ಷ ಜೇಬಿಗಿಳಿಸಿದರು. 55 ವರ್ಷ ವಯಸ್ಸಿನ ಆನಂದ್ ಅವರು ಸುಮಾರು ₹56 ಲಕ್ಷ ತಮ್ಮದಾಗಿಸಿಕೊಂಡರು.

ADVERTISEMENT

ಗುರುವಾರವೇ ಕ್ಯಾಸ್ಪರೋವ್ ಅವರು ಐದು ಪಾಯಿಂಟ್‌ (8.5–3.5) ಮುನ್ನಡೆ ಸಂಪಾದಿಸಿದ್ದರು. ಅಂತಿಮ ದಿನದ ನಾಲ್ಕು ಪಂದ್ಯಗಳಲ್ಲಿ ಪ್ರತಿಯೊಂದು ಗೆಲುವಿಗೆ 3 ಪಾಯಿಂಟ್‌ ಇದ್ದ ಕಾರಣ ಆನಂದ್ ಅವರಿಗೂ ಪ್ರಶಸ್ತಿ ಕ್ಷೀಣ ಅವಕಾಶ ಉಳಿದಿತ್ತು. ಉತ್ತಮ ಹೋರಾಟ ಕಂಡ ಮೊದಲ ಆಟ ಡ್ರಾ ಆಯಿತು. ಎರಡನೇ ಆಟದಲ್ಲಿ ಆನಂದ್ ಸ್ಪಷ್ಟ ಮೇಲುಗೈ ಪಡೆದಿದ್ದರೂ, ತಪ್ಪು ಎಕ್ಸ್‌ಚೇಂಜ್‌ ದುಬಾರಿಯಾಯಿತು. ಪಂದ್ಯದಲ್ಲಿ ಕ್ಯಾಸ್ಪರೋವ್ ಗೆದ್ದರು. 

ಕ್ಯಾಸ್ಪರೋವ್‌ ಅಷ್ಟರೊಳಗೆ ಪಂದ್ಯವಾಳಿ ಗೆದ್ದಾಯಿತು. ಉಳಿದ ಎರಡು ಬ್ಲಿಟ್ಝ್ ಗೇಮ್‌ಗಳನ್ನು ಆಡಬೇಕಿತ್ತು. ಈ ಎರಡರಲ್ಲೂ ಆನಂದ್ ಗೆದ್ದರು.

‘ಈ ಪಂದ್ಯಾವಳಿಯಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿರಲಿಲ್ಲ. ಆದರೆ ಈ ಸೆಣಸಾಟ ಹುಟ್ಟಿಸಿದ ಕುತೂಹಲ, ಇದಕ್ಕೆ ದೊರೆತ ಸ್ಪಂದನೆ ತಮಗೆ ಖುಷಿ ನೀಡಿದೆ’ ಎಂದು 62 ವರ್ಷ ವಯಸ್ಸಿನ ಕ್ಯಾಸ್ಪರೋವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.