ADVERTISEMENT

ಲಾಕ್‌ಡೌನ್‌ನಿಂದ ಕೋಚ್, ನೆರವು ಸಿಬ್ಬಂದಿಗೆ ತೊಂದರೆ: ಗೋಪಿಚಂದ್

ಪಿಟಿಐ
Published 12 ಜೂನ್ 2020, 21:32 IST
Last Updated 12 ಜೂನ್ 2020, 21:32 IST
ಗೋಪಿಚಂದ್
ಗೋಪಿಚಂದ್   

ಮುಂಬೈ: ಲಾಕ್‌ಡೌನ್ ಅವಧಿಯಲ್ಲಿ ಕ್ರೀಡಾ ತರಬೇತುದಾರರು ಮತ್ತು ನೆರವು ಸಿಬ್ಬಂದಿಗೆ ಆರ್ಥಿಕವಾಗಿ ತುಂಬಾ ನಷ್ಟವಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಬಹುತೇಕ ಆದಾಯವೇ ನಿಂತಿತ್ತು ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ‍ಪಿ. ಗೋಪಿಚಂದ್ ಹೇಳಿದ್ದಾರೆ.

ಕ್ರೀಡಾ ಪ್ರತಿಷ್ಠಾನಗಳು ಮತ್ತು ಅಕಾಡೆಮಿಗಳ ಸಿಬ್ಬಂದಿಗೆ ನೆರವು ಒದಗಿಸಲು ‘ರನ್‌ ಟು ದ ಮೂನ್’ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಅಥ್ಲೀಟ್ ಅಶ್ವಿನಿ ನಾಚಪ್ಪ ಮತ್ತು ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಅವರೊಂದಿಗೆ ಗೋಪಿಚಂದ್ ಚಾಲನೆ ನೀಡಿದರು. ಐಡಿಬಿಐ ಫೆಡರಲ್ ಜೀವವಿಮೆ ಮತ್ತು ಎನ್‌ಇಬಿ ಸ್ಪೋರ್ಟ್ಸ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಹೋದ ಮೂರು ತಿಂಗಳಿನಿಂದ ಕೋಚ್ ಮತ್ತು ಸಿಬ್ಬಂದಿಯು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ನಿಧಿ ಸಂಗ್ರಹದ ಮೂಲಕ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಕ್ರೀಡೆಯ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರಿಗೆ ಇಂತಹ ಸಂದರ್ಭದಲ್ಲಿ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ADVERTISEMENT

ಈ ಕಾರ್ಯಕ್ರಮದಡಿಯಲ್ಲಿ 3,84,400 ಕಿಲೋಮೀಟರ್ಸ್ ಓಟವನ್ನು ಅಥ್ಲೀಟ್‌ಗಳು ಕ್ರಮಿಸುವರು. ಜೂನ್ 20ರಿಂದ ಜುಲೈ 20ರವರೆಗೆ ಈ ಓಟವು ನಡೆಯಲಿದೆ. ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವರು. ಅದರಲ್ಲಿ ವೃತ್ತಿಪರ ಅಥ್ಲೀಟ್‌ಗಳೂ ಇದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಓಟ ನಡೆಯುವುದು.

‘ಕ್ರೀಡಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಈ ಮಹಾಮಾರಿಯಿಂದಾಗಿ ಬಹಳಷ್ಟು ತೊಂದರೆಗಳಾಗಿವೆ. ಅವರ ಸಂಕಷ್ಟವನ್ನು ಪರಿಹರಿಸಲು ನಾವೂ ಕೈಜೋಡಿಸಿದ್ದೇವೆ. ಖ್ಯಾತನಾಮ ಕ್ರೀಡಾಪಟುಗಳು ಬೆಂಬಲಕ್ಕೆ ನಿಂತಿರುವುದು ಸಂಪೂರ್ಣ ಯಶಸ್ಸು ಸಾಧಿಸುವ ಭರವಸೆ ಇದೆ’ ಎಂದು ಐಡಿಬಿಐ ಜೀವವಿಮೆಯ ವ್ಯವಸ್ಥಾಪಕ ನಿರ್ದೇಶಕ ವಿಘ್ನೇಶ್ ಶಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.