ADVERTISEMENT

Commonwealth Games: ಬರ್ಮಿಂಗ್‌ಹ್ಯಾಮ್‌ನಲ್ಲಿ ಮೂಡಿದ ಭರವಸೆ ಬೆಳಕು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:21 IST
Last Updated 9 ಆಗಸ್ಟ್ 2022, 5:21 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್: ಪದಕದ ನಿರೀಕ್ಷೆ ಇಟ್ಟುಕೊಂಡವರು ನಿರಾಸೆ ಉಂಟುಮಾಡಲಿಲ್ಲ. ಕೆಲವರು ಅಚ್ಚರಿಯ ಫಲಿತಾಂಶ ನೀಡಿದರು. ಒಂದಷ್ಟು ಸ್ಪರ್ಧೆಗಳಲ್ಲಿ ಐತಿಹಾಸಿಕ ಸಾಧನೆಯ ಸಂಭ್ರಮ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಒಟ್ಟಾರೆ ಸಾಧನೆಯ ಸಂಕ್ಷಿಪ್ತ ನೋಟವಿದು. 215 ಕ್ರೀಡಾಪಟುಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಭಾರತ ತಂಡ, 61 ಪದಕಗಳನ್ನು ಬಗಲಿಗೆ ಹಾಕಿಕೊಂಡಿದೆ.

ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್ ಪಡೆದ ಬೆಳ್ಳಿಯೊಂದಿಗೆ ಈ ಕೂಟದಲ್ಲಿ ಆರಂಭವಾಗಿದ್ದ ಭಾರತದ ಪದಕದ ಬೇಟೆಗೆ, ಪುರುಷರ ಹಾಕಿ ತಂಡ ಸೋಮವಾರ ಜಯಿಸಿದ ಬೆಳ್ಳಿಯೊಂದಿಗೆ ತೆರೆಬಿದ್ದಿತು. 11 ದಿನ ವಿವಿಧ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಸ್ಮರಣೀಯ ಸಾಧನೆ ಮಾಡಿದರು. ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಕೆನಡಾ ಬಳಿಕ ಪದಕ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಕೊನೆಯ ಎರಡು ದಿನಗಳಲ್ಲಿ 10ಕ್ಕೂ ಅಧಿಕ ಚಿನ್ನ ಕೊರಳಿಗೇರಿಸಿಕೊಂಡದ್ದು, ಪದಕ ಪಟ್ಟಿಯಲ್ಲಿ ಮೇಲಕ್ಕೇರಲು ಕಾರಣ. ಕುಸ್ತಿ, ವೇಟ್‌ಲಿಫ್ಟಿಂಗ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌ ಮತ್ತು ಟೇಬಲ್ ಟೆನಿಸ್‌ನಲ್ಲಿ ಭಾರತ ಹೆಚ್ಚು ಚಿನ್ನ ಗೆದ್ದುಕೊಂಡಿತು. ಅಷ್ಟೊಂದು ಜನಪ್ರಿಯತೆ ಹೊಂದಿರದೇ ಇರುವ ಲಾನ್‌ ಬಾಲ್ಸ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದು ಸಂಭ್ರಮಿಸಿತು.

ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಎಂಟು ಪದಕ ಜಯಿಸಿದ್ದು, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಶಕ್ತಿಯನ್ನು ಸಾಬೀತುಪಡಿಸಿತು. ಸ್ಟಾರ್‌ ಅಥ್ಲೀಟ್‌ ನೀರಜ್‌ ಚೋಪ್ರಾ ಅವರ ಅನುಪಸ್ಥಿತಿಯಲ್ಲೂ 1ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಜಯಿಸಿದೆ. ವಿದೇಶದಲ್ಲಿ ನಡೆದ ಕೂಟಗಳ ಅಥ್ಲೆಟಿಕ್ಸ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆ ಈ ಬಾರಿ ಮೂಡಿಬಂದಿದೆ.

ಶ್ರೇಷ್ಠ ಸಾಧನೆ: ಭಾರತದ ಹೊರಗೆ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ ನಾಲ್ಕನೇ ಉತ್ತಮ ಪ್ರದರ್ಶನ ಇದಾಗಿದೆ. ಭಾರತದ ಶ್ರೇಷ್ಠ ಸಾಧನೆ 2010ರ ನವದೆಹಲಿ ಕಾಮನ್‌ವೆಲ್ತ್ ಕೂಟದಲ್ಲಿ ದಾಖಲಾಗಿತ್ತು. ಅಲ್ಲಿ 38 ಚಿನ್ನ ಸೇರಿದಂತೆ 101 ಪದಕಗಳು ಬಂದಿದ್ದವು.

2002ರ ಮ್ಯಾಂಚೆಸ್ಟರ್‌ ಕೂಟದಲ್ಲಿ 30 ಚಿನ್ನ ಒಳಗೊಂಡಂತೆ 69 ಪದಕ ಜಯಿಸಿದ್ದ ಭಾರತ, ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ತೋರಿತ್ತು. 2018ರ ಗೋಲ್ಡ್‌ಕೋಸ್ಟ್‌ ಕೂಟದಲ್ಲಿ 26 ಚಿನ್ನ ಸೇರಿದಂತೆ 66 ಪದಕಬಂದಿದ್ದವು. 2006ರ ಮೆಲ್ಬರ್ನ್‌ ಕೂಟದಲ್ಲಿ ಭಾರತಕ್ಕೆ 22 ಚಿನ್ನ ದೊರೆತಿದ್ದರೂ, ಒಟ್ಟು ದೊರೆತದ್ದು 50 ಪದಕ. ಆದ್ದರಿಂದ ಈ ಬಾರಿಯದ್ದು ವಿದೇಶಿ ನೆಲದಲ್ಲಿ ಮೂರನೇ ಶ್ರೇಷ್ಠ ಸಾಧನೆಯಾಗಿದೆ.

ಕೂಟದ ಆರಂಭಕ್ಕೆ ಮುನ್ನ ತಂಡಗಳ ಆಯ್ಕೆಯಲ್ಲಿನ ಗೊಂದಲ, ನ್ಯಾಯಾಲಯದ ಮೊರೆ ಹೋದ ಬಳಿಕ ತಂಡದಲ್ಲಿ ಕೆಲವರಿಗೆ ಸ್ಥಾನ, ವೀಸಾ ಲಭಿಸುವಲ್ಲಿ ವಿಳಂಬ ಸೇರಿದಂತೆ ವಿವಾದಗಳೇ ಹೆಚ್ಚು ಸುದ್ದಿಯಾಗಿದ್ದವು. ಆದರೆ ವಿವಾದಗಳನ್ನು ಬದಿಗಿರಿಸಿದ ಕ್ರೀಡಾಪಟುಗಳು ವೀರೋಚಿತ ಪ್ರದರ್ಶನ ನೀಡಿ ದೇಶಕ್ಕೆ ಹೆಮ್ಮೆ ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.