ವೇಟ್‌ಲಿಫ್ಟಿಂಗ್
ಪ್ರಾತಿನಿಧಿಕ ಚಿತ್ರ
ಅಹಮದಾಬಾದ್ (ಪಿಟಿಐ): ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ದಿಲ್‌ಬಾಗ್ ಸಿಂಗ್ ಅವರು ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಸೀನಿಯರ್ ವಿಭಾಗದಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಕೂಟದ ಐದನೇ ದಿನವಾದ ಶುಕ್ರವಾರ ಪುರುಷರ 94 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ದಿಲ್‌ಬಾಗ್ 342 ಕೆಜಿ (153 ಕೆಜಿ ಸ್ನ್ಯಾಚ್ + 189 ಕೆಜಿ ಕ್ಲೀನ್ ಮತ್ತು ಜರ್ಕ್) ಭಾರ ಎತ್ತಿ ಎರಡನೇ ಸ್ಥಾನ ಗಳಿಸಿದರು. ಮಲೇಷ್ಯಾದ ಮೊಹಮ್ಮದ್ ಶ್ಯಾಮಿ 343 ಕೆಜಿ (150+193) ಭಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಆಸ್ಟ್ರೇಲಿಯಾದ ಆಲಿವರ್ ಸ್ಯಾಕ್‌ಸ್ಟನ್ (336ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಸೀನಿಯರ್ ಮಹಿಳೆಯರ 86 ಕೆ.ಜಿ ವಿಭಾಗದಲ್ಲಿ ವಂಶಿತಾ ವರ್ಮಾ 222 ಕೆ.ಜಿ (95+127) ಭಾರವನ್ನು ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಆಸ್ಟ್ರೇಲಿಯಾದ ಎಲೀನ್ ಸಿಕಮಟಾನಾ 255 ಕೆಜಿ (110+145) ಮತ್ತು ನ್ಯೂಜಿಲೆಂಡ್‌ನ ಲಿತಿಯಾ ನಕಗಿಲೆವು 235 ಕೆಜಿ (107+128) ಭಾರ ಎತ್ತಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು.
ಉದಯೋನ್ಮುಖ ತಾರೆ ಸಾಯಿರಾಜ್ ಪರದೇಶಿ ಅವರು ಜೂನಿಯರ್ ವಿಭಾಗದ ಪುರುಷರ 88 ಕೆಜಿ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದರು. ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್ ಚಿನ್ನ ವಿಜೇತ ಸಾಯಿರಾಜ್ ಅವರು 348 ಕೆಜಿ (157+191) ಕೆಜಿ ಭಾರ ಎತ್ತಿ ಜೀವನಶ್ರೇಷ್ಠ ಸಾಧನೆ ಮಾಡಿದರು. ಜೂನಿಯರ್ ಸ್ನ್ಯಾಚ್ ವಿಭಾಗದ (155 ಕೆಜಿ) ದಾಖಲೆಯನ್ನೂ ಅವರು ಮುರಿದರು.
ಕೆನಡಾದ ಬ್ರೇಡನ್ ಕೆನಡಿ 347 ಕೆಜಿ (164+183) ಬೆಳ್ಳಿ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಮೂರು ಬಾರಿಯ ಕಾಮನ್‌ವೆಲ್ತ್ ಚಾಂಪಿಯನ್ ಅಜಯ್ ಸಿಂಗ್ (315) ಆರನೇ ಸ್ಥಾನ ಗಳಿಸಿದರು.
88 ಕೆ.ಜಿ ಯೂತ್ ವಿಭಾಗದಲ್ಲಿ ಶಾ ಹುಸೇನ್ ಒಟ್ಟು 267 ಕೆ.ಜಿ (115+ 152) ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. ಹೃಂದನಂದ ದಾಸ್ (317 ಕೆಜಿ) ಬೆಳ್ಳಿ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.