ADVERTISEMENT

ಭಾರತಕ್ಕೆ ಜಪಾನ್ ಸವಾಲು

ಏಷ್ಯಾ ಕಪ್ ಹಾಕಿ ಟೂರ್ನಿ: ಸೂಪರ್–4ರ ಘಟ್ಟದ ಮೊದಲ ಹಣಾಹಣಿ

ಪಿಟಿಐ
Published 27 ಮೇ 2022, 13:48 IST
Last Updated 27 ಮೇ 2022, 13:48 IST
ಜಪಾನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ ಭಾರತ ತಂಡ –ಟ್ವಿಟರ್ ಚಿತ್ರ
ಜಪಾನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ ಭಾರತ ತಂಡ –ಟ್ವಿಟರ್ ಚಿತ್ರ   

ಜಕಾರ್ತ: ಗುಂಪುಹಂತದಲ್ಲಿ ನಿರಾಶೆಯ ಕೂಪದಿಂದ ಪುಟಿದೆದ್ದು ಭರ್ಜರಿ ಜಯ ಗಳಿಸಿರುವ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್–4 ಹಂತದ ಮೊದಲ ಪಂದ್ಯದಲ್ಲಿ ಶನಿವಾರ ಜಪಾನ್ ವಿರುದ್ಧ ಸೆಣಸಲಿದೆ.

ಗುಂಪು ಹಂತದಲ್ಲಿ ಜಪಾನ್ ವಿರುದ್ಧ ಸೋತ ಭಾರತ ಸೇಡು ತೀರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದು ಫೈನಲ್ ಪ್ರವೇಶದ ಹಾದಿ ಸುಗಮಗೊಳಿಸುವ ನಿರೀಕ್ಷೆಯನ್ನೂ ಹೊಂದಿದೆ.

ಅಷ್ಟೊಂದು ಬಲಿಷ್ಠವಲ್ಲದ ಆತಿಥೇಯ ಇಂಡೊನೇಷ್ಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ 16–0ಯಿಂದ ಜಯ ಗಳಿಸಿತ್ತು. ಇದೇ ಲಯವನ್ನು ಮುಂದುವರಿಸಿ ಫೈನಲ್‌ನತ್ತ ದಾಪುಗಾಲು ಹಾಕಲು ಸರ್ದಾರ್ ಸಿಂಗ್ ಬಳಿ ತರಬೇತಿ ಪಡೆದಿರುವ ಯುವ ತಂಡ ಪ್ರಯತ್ನಿಸಲಿದೆ.

ADVERTISEMENT

ಗುಂಪು ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಜೊತೆ 1-1ರಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ ನಂತರ ಜಪಾನ್‌ಗೆ 2–5ರಲ್ಲಿ ಮಣಿದಿತ್ತು. ಹೀಗಾಗಿ ಕೊನೆಯ ಪಂದ್ಯದಲ್ಲಿ 15–0ಯಿಂದ ಗೆದ್ದರಷ್ಟೇ ಸೂಪರ್–4 ಹಂತಕ್ಕೇರುವ ಸಾಧ್ಯತೆ ಇತ್ತು. ಈ ಸವಾಲನ್ನು ಸಮರ್ಥವಾಗಿ ಎದುರಿಸಿದ ತಂಡ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿತ್ತು. ಆ ತಂಡದ ವಿಶ್ವಕಪ್ ಪ್ರವೇಶದ ಕನಸನ್ನೂ ಭಗ್ನಗೊಳಿಸಿತ್ತು.

12 ಮಂದಿ ಹೊಸಬರನ್ನು ಒಳಗೊಂಡ ತಂಡವನ್ನು ಟೂರ್ನಿಯಲ್ಲಿ ಭಾರತ ಕಣಕ್ಕೆ ಇಳಿಸಿದೆ. ಸೂಪರ್‌–4ರ ಹಂತದಲ್ಲಿ ಭಾರತ ತಂಡ ಜಪಾನ್‌, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾವನ್ನು ಎದುರಿಸಬೇಕಾಗಿದೆ. ಎಲ್ಲ ತಂಡಗಳು ಒಂದೊಂದು ಬಾರಿ ಮುಖಾಮುಖಿಯಾಗಲಿದ್ದು ಅಗ್ರ 2 ಸ್ಥಾನ ಗಳಿಸುವ ತಂಡಗಳು ಫೈನಲ್ ಪ್ರವೇಶಿಸಲಿವೆ.

ಡ್ರ್ಯಾಕ್‌ ಫ್ಲಿಕ್ಕರ್‌ಗಳ ಕೊರತೆ

ಪರಿಣಾಮಕಾರಿ ಡ್ರ್ಯಾಕ್‌ ಫ್ಲಿಕ್ಕರ್‌ಗಳ ಕೊರತೆ ಭಾರತ ತಂಡವನ್ನು ಕಾಡುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಬೀರೇಂದರ್ ಲಾಕ್ರಾ ನೇತೃತ್ವದ ರಕ್ಷಣಾ ವಿಭಾಗ ವೇಗದ ಆಟಕ್ಕೆ ಹೆಸರಾಗಿರುವ ಜಪಾನ್ ವಿರುದ್ಧ ಹೆಚ್ಚು ಪರಿಣಾಮಕಾರಿಯಗಿ ಆಡಬೇಕಾಗಿದೆ. ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಬಲ್ಲ ದಿಪ್ಸನ್ ಟರ್ಕಿ, ಅನುಭವಿ ಆಟಗಾರ ಎಸ್‌.ವಿ ಸುನಿಲ್ ಮೇಲೆಯೂ ನಿರೀಕ್ಷೆ ಇದೆ.

ಸೂಪರ್–4 ಹಂತದ ಇಂದಿನ ಪಂದ್ಯಗಳು

ಮಲೇಷ್ಯಾ–ದಕ್ಷಿಣ ಕೊರಿಯಾ

ಆರಂಭ: ಮಧ್ಯಾಹ್ನ 2.30

ಭಾರತ–ಜಪಾನ್

ಆರಂಭ: ಸಂಜೆ 5.00

(ಸಮಯ: ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.