ADVERTISEMENT

ಟೋಕಿಯೊ ಒಲಿಂಪಿಕ್ಸ್‌ ನಡೆಸಲು ಕಡೇ ಅವಕಾಶ, ಇಲ್ಲವೇ ಕೂಟ ರದ್ದು: ಐಒಸಿ ಮುಖ್ಯಸ್ಥ

ಏಜೆನ್ಸೀಸ್
Published 21 ಮೇ 2020, 12:40 IST
Last Updated 21 ಮೇ 2020, 12:40 IST
 ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್‌
ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್‌    

ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಆಯೋಜಕರಿಗೆ ಇರುವುದು ಇದೊಂದೇ ಅವಕಾಶ ಎಂದುಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ‘ಬಿಬಿಸಿ’ ಜೊತೆ ಮಾತನಾಡಿದ ಅವರು ‘2021ರಲ್ಲೂ ಕೊರೊನಾ ಹಾವಳಿ ಮುಂದುವರಿದರೆ ಕೂಟವನ್ನು ರದ್ದು ಮಾಡುವುದಾಗಿ ಜಪಾನ್ ಹೇಳಿದೆ.ಅದಕ್ಕೆ ನಮ್ಮ ಸಹಮತವಿದೆ,’ ಎಂದಿದ್ದಾರೆ.

ವಿಶ್ವದಾದ್ಯಂತ ಕೊರೊನಾ–19 ಅಟ್ಟಹಾಸಗೈಯಲು ಆರಂಭಿಸುತ್ತಿದ್ದಂತೆ ಒಲಿಂಪಿಕ್ಸ್ ಕೂಟವನ್ನುಮುಂದಿನ ವರ್ಷದ ಜುಲೈಗೆ ಮುಂದೂಡಲು ಮಾರ್ಚ್‌ನಲ್ಲಿ ನಿರ್ಧರಿಸಲಾಗಿತ್ತು.

ADVERTISEMENT

‘ಜಪಾನ್‌ನ ಸದ್ಯದ ಪರಿಸ್ಥಿತಿ ನಮಗೆಲ್ಲ ಅರ್ಥವಾಗುತ್ತಿದೆ. ಮೂರು ಸಾವಿರದಿಂದ ಐದು ಸಾವಿರ ಮಂದಿಯನ್ನು ಒಳಗೊಂಡ ಆಯೋಜನಾ ಸಮಿತಿಯನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಪ್ರಪಂಚದ ವಿವಿಧ ಫೆಡರೇಷನ್‌ಗಳು ಕೂಡ ಪ್ರತಿವರ್ಷ ತಮ್ಮ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅನಿಶ್ಚಿತತೆ ಇದ್ದರೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳಿಗೂ ಉತ್ಸಾಹ ಇರುವುದಿಲ್ಲ’ ಎಂದು ಅವರು ಹೇಳಿದರು.

ವಿಶ್ವಯುದ್ಧದ ಸಂದರ್ಭವನ್ನು ಹೊರತುಪಡಿಸಿದರೆ ಎಂದೂ ಒಲಿಂಪಿಕ್ಸ್ ಕೂಟವನ್ನು ರದ್ದು ಮಾಡಲಿಲ್ಲ. ಆದರೆ ಕೊರೊನಾ ಹಾವಳಿ ಮುಂದುವರಿದರೆ ಟೋಕಿಯೊ ಒಲಿಂಪಿಕ್ಸ್ ರದ್ದು ಮಾಡುವುದು ಖಚಿತ ಎಂದು ಜಪಾನ್ ಈಗಾಗಲೇ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.