ADVERTISEMENT

ಬಸವರಾಜ ಎಂದರೆ ಓಟದ ನೆನಪು...

ಶಿಷ್ಯನ ಕುರಿತು ಮಾತನಾಡಿ ಭಾವುಕರಾದ ಭೀಮಣ್ಣನವರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:17 IST
Last Updated 27 ಸೆಪ್ಟೆಂಬರ್ 2021, 18:17 IST
   

ಹುಬ್ಬಳ್ಳಿ: ‘ಬಸವರಾಜ ಇಂಗಳಗಿ ಎಂದರೆ ಮೊದಲು ನೆನಪಾಗುವುದು ಓಟ, ಕೊನೆಯಲ್ಲಿ ನೆನಪಾಗುವುದು ಕೂಡ ಓಟವೇ...’

ತಮ್ಮ ಶಿಷ್ಯನನ್ನು ಹೀಗೆ ನೆನಪಿಸಿಕೊಂಡಿದ್ದು ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಕೆ.ಎಸ್‌. ಭೀಮಣ್ಣನವರ. ಬಸವರಾಜ 1994–95ರಿಂದ ಮೂರು ವರ್ಷ ಇದೇ ಕಾಲೇಜಿನಲ್ಲಿ ಪದವಿ ಪಡೆದಿದ್ದರು.

‘ದಸರಾ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಬಂದಿದ್ದ ಬಸವರಾಜ ಸ್ಥಳೀಯ ಪ್ರಮುಖ ಓಟಗಾರ ಚಿನ್ನಪ್ಪ ಅವರನ್ನು ಹಿಂದಿಕ್ಕಿ ಬಹುಮಾನ ಗೆದ್ದದ್ದು ಆಗಿನ ದೊಡ್ಡ ಸಾಧನೆ ಎನಿಸಿತ್ತು. ಅಂದು ಆತ ಬಣ್ಣಬಣ್ಣದ ಚಡ್ಡಿ ಹಾಗೂ ಬನಿಯನ್‌ ಧರಿಸಿ ಓಡಿದ ರೀತಿ ಈಗಲೂ ಕಣ್ಣುಗಳಲ್ಲಿ ಕಟ್ಟಿದಂತಿದೆ. ಆಗಿನಿಂದ ಆತನ ಬದುಕಿಗೆ ಹೊಸ ದಾರಿ ಸಿಕ್ಕಿತು. ಸ್ಪರ್ಧೆ ಗೆದ್ದ ಬಳಿಕ ಕ್ರೀಡಾ ಉಡುಪು ಕೊಡಿಸಿದ್ದೆ’ ಎಂದು ಭೀಮಣ್ಣನವರ ನೆನಪಿಸಿಕೊಂಡರು.

ADVERTISEMENT

‘ಆಗ ಕಾಲೇಜಿನ ಪ್ರಾಚಾರ್ಯರಾಗಿದ್ದ ವಜ್ರಕುಮಾರ್‌ ಅವರು ಕ್ರೀಡಾಪಟುಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಅದರಲ್ಲಿಯೂ ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು’ ಎಂದರು.

‘ಇಟಲಿಯ ಟೊರಿನೊದಲ್ಲಿ ನಡೆದಿದ್ದ 25ನೇ ಐಎಎಎಫ್‌ ವಿಶ್ವ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಟ್ರಯಲ್ಸ್‌ಗೆ ಆಯ್ಕೆಯಾಗಿದ್ದ. ಮಾಹಿತಿಯ ಕೊರತೆಯಿಂದಾಗಿ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದೆ ವಾಪಸ್‌ ಬಂದಿದ್ದ. ಅಲ್ಲಿ ಅವಕಾಶ ಸಿಕ್ಕಿದ್ದರೆ ಬಸವರಾಜ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ಪದಕ ತಂದುಕೊಡುವ ಸಾಮರ್ಥ್ಯ ಹೊಂದಿದ್ದ. ಅಂತರ ವಿಶ್ವವಿದ್ಯಾಲಯ ಮಟ್ಟದ ಅನೇಕ ಟೂರ್ನಿಗಳಲ್ಲಿ ಅದನ್ನು ಸಾಬೀತು ಮಾಡಿದ್ದಾನೆ’ ಎಂದು ಭೀಮಣ್ಣನವರ ನೆನಪಿಸಿಕೊಂಡರು.

ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್‌ ವಿಲಾಸ ನೀಲಗುಂದ ‘ನಾನು ಜೆಎಸ್‌ಎಸ್‌ ಕಾಲೇಜು ಸೇರಿದಾಗ ಬಸವರಾಜ ಅವರು ರಾಷ್ಟ್ರೀಯ ಮಟ್ಟದ ಕ್ರಾಸ್‌ಕಂಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ನಾವಿಬ್ಬರು ಒಂದೇ ಜಿಲ್ಲೆಯವರಾದ ಕಾರಣ ಉತ್ತಮ ಬಾಂಧವ್ಯವಿತ್ತು. ಆಗಷ್ಟೇ ಸ್ಪರ್ಧಾತ್ಮಕ ಅಥ್ಲೆಟಿಕ್ಸ್‌ಗೆ ಬಂದಿದ್ದ ನನಗೆ ಅವರ ಶಿಸ್ತು ಹಾಗೂ ಬದ್ಧತೆ ಸ್ಫೂರ್ತಿಯಾಗಿತ್ತು’ ಎಂದರು.

ಬಸವರಾಜ ಇಂಗಳಗಿ ನಿಧನ

ಗದಗ: ರಾಷ್ಟ್ರಮಟ್ಟದ ಗುಡ್ಡಗಾಡು (ಕ್ರಾಸ್‌ಕಂಟ್ರಿ) ಓಟಗಾರ, ರೈಲ್ವೆ ಉದ್ಯೋಗಿ ಶಿರಹಟ್ಟಿಯ ಬಸವರಾಜ ಇಂಗಳಗಿ (47) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ತಾಯಿ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ 10.30ಕ್ಕೆ ಶಿರಹಟ್ಟಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಗದಗ ರೈಲ್ವೆ ಕಚೇರಿಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಲಖನೌದಲ್ಲಿ ನಡೆದಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕ್ರಾಸ್‌ ಕಂಟ್ರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.