
ಬೆಂಗಳೂರು: ಉದಯೋನ್ಮುಖ ಆಟಗಾರ್ತಿ ಸಾಕ್ಷ್ಯಾ ಸಂತೋಷ್ ಅವರು ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ 13 ವರ್ಷದೊಳಗಿನ ಬಾಲಕಿಯರ ಹಾಗೂ ಹೋಪ್ಸ್ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಸಾಕ್ಷ್ಯಾ ಅವರು ಭಾನುವಾರ ನಡೆದ 13 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಸುತ್ತಿನಲ್ಲಿ 12–14, 13–11, 12–10, 11–1ರಿಂದ ಲಕ್ಷ್ಮಿ ಆಶ್ರಿತಾ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಹೋಪ್ಸ್ ಬಾಲಕಿಯರ ಫೈನಲ್ ಹಣಾಹಣಿಯಲ್ಲಿ ಸಾಕ್ಷ್ಯಾ 11–5, 11–2, 9–11, 11–4ರಿಂದ ತಮನ್ನಾ ಎನ್. ಅವರನ್ನು ಮಣಿಸಿ, ಪ್ರಶಸ್ತಿ ಡಬಲ್ ಸಾಧಿಸಿದರು.
ಸಿದ್ಧಾಂತ್‌ಗೆ ಕಿರೀಟ: 13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಸಿದ್ದಾಂತ್ ಎಂ. ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 11–6, 11–5, 12–14, 11–3ರಿಂದ ಅರ್ಣವ್ ಮಿಥುನ್ ಅವರನ್ನು ಮಣಿಸಿದರು.
13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ರನ್ನರ್‌ಅಪ್ ಆಗಿದ್ದ ಅರ್ಣವ್ ಅವರು ಹೋಪ್ಸ್ ಬಾಲಕರ ವಿಭಾಗದಲ್ಲಿ ಕಿರೀಟ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅವರು 14–12, 11–7, 10–12, 13–11ರಿಂದ ಶಾರ್ವಿಲ್ ಕಂಬ್ಳೇಕರ್ ವಿರುದ್ಧ ರೋಚಕ ಗೆಲುವು ಸಾಧಿಸಿದರು.
ಶನಿವಾರ ನಡೆದಿದ್ದ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ರೇಯಾನ್ಶ್ ಜಲನ್ ಅವರು 6–11, 11–7, 7–11, 11–9, 11–6ರಿಂದ ವೇದಾಂತ್ ವಸಿಷ್ಠ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.