ADVERTISEMENT

ತಾಂಡಾ ಹುಡುಗಿಯ ಸೂಪರ್‌ ಸೈಕ್ಲಿಂಗ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 21:00 IST
Last Updated 8 ಡಿಸೆಂಬರ್ 2019, 21:00 IST
ಪಾಯಲ್‌ ಚವ್ಹಾಣ
ಪಾಯಲ್‌ ಚವ್ಹಾಣ   

ವಿಜಯಪುರ ಸಮೀಪದಲ್ಲಿ ಭೂತನಾಳ ಎಂಬ ಪುಟ್ಟ ತಾಂಡ ಇದೆ. ಅಲ್ಲಿನ ಬಹುತೇಕ ಜನರಿಗೆ ಬದುಕು ಸಾಗಿಸುವುದೇ ದೊಡ್ಡ ಸವಾಲು. ಬಡತನದ ಬೇಗೆಯಲ್ಲಿಯೂ ತಮ್ಮ ಬದುಕು ನೋಡಿಕೊಂಡು, ಮಕ್ಕಳ ಬದುಕನ್ನೂ ಹಸನು ಮಾಡುವ ಸಂಕಷ್ಟ ಅಲ್ಲಿನ ಪೋಷಕರದ್ದು. ಇನ್ನು ಆಟ, ಪಾಠವಂತೂ ದೂರದ ಮಾತು.

ಇಂಥ ಕಷ್ಟದ ಸಂದರ್ಭದಲ್ಲಿಯೂ ಪಾಠದ ಜೊತೆಗೆ ಆಟದಲ್ಲೂ ಉನ್ನತ ಸಾಧನೆಯ ಹಾದಿಯಲ್ಲಿ ಸಾಗಿರುವ ಯುವ ಸೈಕ್ಲಿಂಗ್‌ ಪ್ರತಿಭೆ ಪಾಯಲ್‌ ಚವ್ಹಾಣ. 14 ವರ್ಷದ ಪಾಯಲ್‌ ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಜಯಿಸಿದ್ದಾಳೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವಿಜಯಪುರ ಕ್ರೀಡಾ ವಸತಿನಿಲಯದಲ್ಲಿ ಒಂದು ವರ್ಷದ ಹಿಂದೆಯಷ್ಟೇ ವೃತ್ತಿಪರ ತರಬೇತಿ ಆರಂಭಿಸಿದ ಪಾಯಲ್‌ 2018ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ರಾಜ್ಯಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ 14 ವರ್ಷದ ಒಳಗಿನವರ ವಿಭಾಗದ 2 ಕಿ.ಮೀ. ವೈಯಕ್ತಿಕ ಪರ್ಸೂಟ್‌ನಲ್ಲಿ ಬೆಳ್ಳಿ ಜಯಿಸಿದ್ದರು. 500 ಮೀಟರ್‌ ಟೈಮ್‌ ಟ್ರಯಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷದ ಒಳಗಿನವರ ಸ್ಪರ್ಧೆಯಲ್ಲಿಯೂ ಕಠಿಣ ಪೈಪೋಟಿ ಒಡ್ಡಿದ ಪಾಯಲ್‌ ಅದೇ ಟೂರ್ನಿಯ 2 ಕಿ.ಮೀ. ವೈಯಕ್ತಿಕ ಪರ್ಸೂಟ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

ADVERTISEMENT

2018ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಜ್ಯಮಟ್ಟದ ಸೈಕ್ಲಿಂಗ್‌ನ 14 ವರ್ಷದ ಒಳಗಿನವರ ವಿಭಾಗದ ಟೈಮ್‌ ಟ್ರಯಲ್ಸ್‌ನಲ್ಲಿ ಕಂಚು, 16 ವರ್ಷದ ಒಳಗಿನವರ 10 ಕಿ.ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಹರಿಯಾಣದ ಕುರುಕ್ಷೇತ್ರದಲ್ಲಿ ಜರುಗಿದ್ದ 23ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ 14 ವರ್ಷದ ಒಳಗಿನವರ 10 ಕಿ.ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ಬೆಳ್ಳಿ ಹೆಜ್ಜೆ ಮೂಡಿಸಿದ್ದರು.

ಇದೇ ವರ್ಷ ವಿಜಯಪುರದಲ್ಲಿ ನಡೆದಿದ್ದ ಎಂ.ಟಿ.ಬಿ. ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಒಂದು ಲ್ಯಾಪ್‌ ಟೈಮ್‌ ಟ್ರಯಲ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು. 14 ವರ್ಷದ ಒಳಗಿನವರ ವಿಭಾಗದ ಮಾಸ್ಡ್‌ ಸ್ಟಾರ್ಟ್‌ನಲ್ಲಿ ಬೆಳ್ಳಿ ಮತ್ತು 16 ವರ್ಷದ ಒಳಗಿನವರ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಹೋದ ತಿಂಗಳು ರಾಜಸ್ಥಾನದ ಬಿಕಾನೇರ್‌ನಲ್ಲಿ ಜರುಗಿದ ರೋಡ್ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರು.

ಈ ಸಲದ ಮೈಸೂರು ದಸರಾ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಸೀನಿಯರ್‌ ಆಟಗಾರ್ತಿಯರ ಜೊತೆ ಸ್ಪರ್ಧಿಸಿದ್ದ ಪಾಯಲ್‌ ಬೆಳ್ಳಿ ಪದಕ ಗೆದ್ದುಕೊಂಡಿದ್ದು ತಾಂಡಾ ಪ್ರತಿಭೆಯ ಸಾಮರ್ಥ್ಯಕ್ಕೆ ಸಾಕ್ಷಿ.

ಪಾಯಲ್‌ ಚವ್ಹಾಣ್ ಅವರ ಮಾಮಾ ರಮೇಶ ರಾಠೋಡ ಮೊದಲು ವಿಜಯಪುರ ಕ್ರೀಡಾ ನಿಲಯದಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿದ್ದರು. ಅವರಿಂದ ಪ್ರಭಾವಿತಗೊಂಡು ವೃತ್ತಿಪರ ಅಭ್ಯಾಸ ನಡೆಸಿದ ಪಾಯಲ್‌ ಸೈಕ್ಲಿಂಗ್‌ನಲ್ಲಿ ಪದಕಗಳನ್ನು ಬೇಟೆಯಾಡುತ್ತಿದ್ದಾಳೆ. ಸದ್ಯಕ್ಕೆ ವಿಜಯಪುರ ಕ್ರೀಡಾ ವಸತಿನಿಲಯದಲ್ಲಿ ಅಲ್ಕಾ ಫಡತಾರೆ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಪಾಯಲ್‌ ವಿಜಯಪುರದಲ್ಲಿ ಬಂಜಾರಾ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಇವರ ತಂದೆ ಖುಷಿಲಾಲ್‌ ಸೊಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡಾಬಾಗಳಲ್ಲಿ ಲಾರಿಗಳಿಗೆ ಗ್ರೀಸ್‌ ಹಾಕುವ ಕೆಲಸ ಮಾಡುತ್ತಾರೆ. ತಾಯಿ ಸುಶೀಲಾಬಾಯಿ ಹೊಲದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

‘ವಸತಿ ನಿಲಯಕ್ಕೆ ಬಂದ ಆರಂಭದಲ್ಲಿ ಪಾಯಲ್‌ ಚುರುಕಾಗಿ ಇರಲಿಲ್ಲ. ಮೊದಲು ಆರು ತಿಂಗಳು ಕಠಿಣ ಅಭ್ಯಾಸ ಮಾಡಿ ನಂತರದ ಆರೇ ತಿಂಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನು ಜಯಿಸಿದಳು. ಖೇಲೊ ಇಂಡಿಯಾ ಅಕಾಡೆಮಿ ನಡೆಸುವ ಯೂತ್‌ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾಳೆ. ಪಾಯಲ್‌ ಕಠಿಣ ಪರಿಶ್ರಮ ಪಡುವುದರಿಂದ ಆಕೆಗೆ ಉತ್ತಮ ಭವಿಷ್ಯವಿದೆ’ ಎಂದು ಕೋಚ್‌ ಅಲಕಾ ಫಡತರೆ ಭರವಸೆ ವ್ಯಕ್ತಪಡಿಸಿದರು.

‘ಮನೆಯಲ್ಲಿ ಕ್ರೀಡಾಮಯ ವಾತಾವರಣ ಇದ್ದ ಕಾರಣ ಪಾಯಲ್‌ ಸೈಕ್ಲಿಂಗ್‌ನಲ್ಲಿ ಆಸಕ್ತಿ ತೋರಿಸಿದಳು. ಆಕೆಯ ತಂಗಿ ಕೂಡ ಇದೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾಳೆ. ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದಾಳೆ. ವಿಜಯಪುರದ ಹಾಸ್ಟೆಲ್‌ನಲ್ಲಿಯೂ ಉತ್ತಮ ತರಬೇತಿ ಸಿಗುತ್ತಿದೆ’ ಎಂದು ರಮೇಶ ರಾಠೋಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.