ADVERTISEMENT

ರಾಜ್ಯ ಕಿರಿಯರ ಈಜು: ದಕ್ಷಣ್‌, ಶರಣ್‌ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 0:43 IST
Last Updated 12 ಜುಲೈ 2025, 0:43 IST
<div class="paragraphs"><p>ಈಜು </p></div>

ಈಜು

   

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ದಕ್ಷಣ್ ಎಸ್‌., ಶರಣ್‌ ಎಸ್‌. ಮತ್ತು ಮತ್ಸ್ಯ ಈಜು ಕೇಂದ್ರದ ಸುಬ್ರಹ್ಮಣ್ಯ ಜೀವಾಂಶ್‌ ಅವರು  ಕರ್ನಾಟಕ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಸಬ್‌ ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ವಿಭಾಗದಲ್ಲಿ ಕೂಟ ದಾಖಲೆಗಳನ್ನು ಸ್ಥಾಪಿಸಿದರು. ಬಾಲಕಿಯರ ವಿಭಾಗದಲ್ಲಿ ರುಜುಲಾ ಎಸ್‌. ಮತ್ತು ತನಿಶಿ ಗುಪ್ತಾ ಚಿನ್ನ ಗೆಲ್ಲುವ ಹಾದಿಯಲ್ಲಿ ದಾಖಲೆಗಳನ್ನು ಮುಳುಗಿಸಿದರು.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಮೂರನೇ ದಿನವಾದ ಶುಕ್ರವಾರ ಐದು ದಾಖಲೆಗಳು ಮೂಡಿಬಂದವು.

ADVERTISEMENT

ದಕ್ಷಣ್‌ ಬಾಲಕರ ಒಂದನೇ ಗುಂಪಿನಲ್ಲಿ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯನ್ನು 8 ನಿಮಿಷ 27.52 ಸೆಕೆಂಡುಗಳಲ್ಲಿ ಕ್ರಮಿಸಿ, ಅನೀಶ್‌ ಎಸ್‌.ಗೌಡ ಅವರು 2021ರಲ್ಲಿ ಸ್ಥಾಪಿಸಿದ್ದ 8ನಿ.30.18 ಸೆ.ಗಳ ದಾಖಲೆಯನ್ನು ಮುಳುಗಿಸಿದರು. 

ಬಾಲಕರ 2ಎ ಗುಂಪಿನ 800 ಮೀ. ಫ್ರೀಸ್ಟೈಲ್‌ನಲ್ಲಿ ಬಿಎಸಿಯ ಶರಣ್ ಎಸ್‌. 8ನಿ.41.26 ಸೆ.ಗಳಲ್ಲಿ ಅಂತರ ಕ್ರಮಿಸಿ, ಸಂಜಯ್‌ ಸಿ.ಜೆ. (ಡಾಲ್ಫಿನ್‌ ಅಕ್ವೆಟಿಕ್ಸ್‌) ಹೆಸರಿನಲ್ಲಿದ್ದ ದಾಖಲೆ (8ನಿ.43.88 ಸೆ.) ಮುರಿದರು.

ಮತ್ಸ್ಯ ಈಜು ಕೇಂದ್ರದ ಎಸ್‌.ಜೀವಾಂಶ್‌ ಎರಡನೇ ಗುಂಪಿನಲ್ಲಿ 2ನಿ.17.82 ಸೆ.ಗಳಲ್ಲಿ ದೂರ ಕ್ರಮಿಸಿ ಅಕ್ಷಜ್‌ ಠಾಕೂರಿಯಾ ಹೆಸರಿನಲ್ಲಿದ್ದ (2ನಿ.18.51) ಸೆ.ಗಳ ದಾಖಲೆ ಮುರಿದರು. 

ಬಾಲಕಿಯರ ಒಂದನೇ ಗುಂಪಿನ 50 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು ಡಾಲ್ಫಿನ್‌ ಅಕ್ವೆಟಿಕ್ಸ್‌ನ ರುಜುಲಾ 28.72 ಸೆ.ಗಳಲ್ಲಿ ಕ್ರಮಿಸಿದರು. ಡಾಲ್ಫಿನ್‌ ಕ್ಲಬ್‌ನ ಮಾನವಿ ವರ್ಮಾ, ತಾನಿಶಿ ಗುಪ್ತಾ ಹೆಸರಿನಲ್ಲಿದ್ದ (28.83) ದಾಖಲೆ ಸುಧಾರಿಸಿದರು.

ಇದೇ ಕ್ಲಬ್‌ನ ತನಿಶಿ ಬಾಲಕಿಯರ ಒಂದನೇ ‘ಬಿ’ ಗುಂಪಿನಲ್ಲಿ50 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು 28.29 ಸೆ.ಗಳಲ್ಲಿ ಪೂರೈಸಿ, ರುಜುಲಾ ಎಸ್‌.ಹೆಸರಿನಲ್ಲಿದ್ದ ದಾಖಲೆ (28.72) ಮುರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.