ADVERTISEMENT

ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ‌ಡೇವಿಡ್‌ ಜಾನ್‌ ರಾಜೀನಾಮೆ

ಪಿಟಿಐ
Published 21 ಆಗಸ್ಟ್ 2020, 13:54 IST
Last Updated 21 ಆಗಸ್ಟ್ 2020, 13:54 IST
ಡೇವಿಡ್‌ ಜಾನ್‌
ಡೇವಿಡ್‌ ಜಾನ್‌   

ನವದೆಹಲಿ: ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ‌ಡೇವಿಡ್‌ ಜಾನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಫೆಡರೇಷನ್‌ನ ಹಿರಿಯ ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ. ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಇತ್ತೀಚೆಗಷ್ಟೇ ಅವರ ಗುತ್ತಿಗೆಯನ್ನು ನವೀಕರಣ ಮಾಡಿತ್ತು.

ಸೆಪ್ಟೆಂಬರ್‌ 2021ರವರೆಗೆ ಅವರ ಒಪ್ಪಂದವನ್ನು ವಿಸ್ತರಿಸಲಾಗಿತ್ತು. ಬಹಳ ದಿನಗಳಿಂದ ಹಾಕಿ ಇಂಡಿಯಾ (ಎಚ್‌ಐ) ನನ್ನನ್ನು ಕಡೆಗಣಿಸಿದ್ದು, ರಾಜೀನಾಮೆ ನೀಡುತ್ತಿರುವುದಾಗಿ ಆಸ್ಟ್ರೇಲಿಯಾ ಮೂಲದ ಜಾನ್‌ ಹೇಳಿದ್ದಾರೆ.

‘ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಎರಡು ದಿನಗಳ ಹಿಂದೆ ಎಚ್‌ಐ ಹಾಗೂ ಸಾಯ್‌ಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಅವರ ರಾಜೀನಾಮೆಯನ್ನುಎಚ್‌ಐ ಅಂಗೀಕರಿಸಿದೆ. ಆದರೆ ಸಾಯ್‌ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ‘ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಹಾಕಿ ಇಂಡಿಯಾದಿಂದ ಕಡೆಗಣನೆಗೆ ಒಳಗಾಗಿದ್ದ ಜಾನ್‌ ಬಹಳ ದಿನಗಳಿಂದ ಹತಾಶೆಗೊಂಡಿದ್ದರು. ತಂಡದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿ ಉನ್ನತ ಅಧಿಕಾರಿಗಳು ಅವರನ್ನು ನಿರ್ಲಕ್ಷಿಸಿದ್ದರು‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಾನ್‌ ಅವರು ತಂಡದ ಯಾವುದೇ ನಿರ್ಧಾರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆಟಗಾರರಿಗೆ ಹಾಗೂ ಕೋಚ್‌ಗಳಿಗೆ ಆನ್‌ಲೈನ್‌ ತರಬೇತಿಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಇದು ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಕಾರಣವಾಗಿತ್ತು. ಕೋವಿಡ್‌–19 ಸೋಂಕು ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಐದು ತಿಂಗಳು ಸ್ಥಗಿತಗೊಂಡಿದ್ದೂ ಅವರ ರಾಜೀನಾಮೆ ನಿರ್ಧಾರಕ್ಕೆ ಕಾರಣವಾಯಿತು‘ ಎಂದು ಅಧಿಕಾರಿ ಹೇಳಿದ್ದಾರೆ.

ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದ ಬಳಿಕ ಜಾನ್‌ ಅವರು ನವದೆಹಲಿಯ ನಿವಾಸದಿಂದಲೇ ಕಾರ್ಯನಿರ್ವಹಿಸುತ್ತಿದ್ದರು.

ಹಾಕಿ ಇಂಡಿಯಾದೊಂದಿಗೆ ಜಾನ್‌ ಅವರು 2011ರಿಂದ ಕಾರ್ಯನಿರ್ವಹಿಸುತ್ತಿದ್ದರು. 2011ರಲ್ಲಿ ಅವರು ಪುರುಷರ ತಂಡಕ್ಕೆ ಫಿಸಿಯೊ ಆಗಿ ಸೇರಿಕೊಂಡಿದ್ದರು. ಮೈಕೆಲ್‌ ನಾಬ್ಸ್‌ ಮುಖ್ಯ ಕೋಚ್‌ ಆಗಿದ್ದರು.

ತಂಡದ ಆಟಗಾರರ ಫಿಟ್‌ನೆಸ್‌ ಮಟ್ಟವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಯದೊಂದಿಗೆ, ಲಂಡನ್‌ ಒಲಿಂಪಿಕ್ಸ್‌ ಬಳಿಕ 2012ರಲ್ಲಿ ಅವರು ಫಿಸಿಯೊ ಹುದ್ದೆ ತೊರೆದಿದ್ದರು. 2016ರಿಂದ ತಂಡದ ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ‌‌ ಆಗಿ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.