ಶಾಂಘೈ: ಸೆಮಿಫೈನಲ್ ಆಘಾತದಿಂದ ಚೇತರಿಸಿದ ಭಾರತದ ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಪಾರ್ಥ್ ಸಾಲುಂಖೆ ಅವರೂ ಮೊದಲ ಬಾರಿ ವಿಶ್ವಕಪ್ ರಿಕರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು. ಇದರೊಂದಿಗೆ ಭಾರತದ ಸ್ಪರ್ಧಿಗಳು ಭಾನುವಾರ ಮುಕ್ತಾಯಗೊಂಡ ಆರ್ಚರಿ ವಿಶ್ವಕಪ್ ಸ್ಟೇಜ್ 2 ಕೂಟದಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದು ಅಭಿಯಾನ ಮುಗಿಸಿದರು.
ಶನಿವಾರ ಭಾರತದ ಕಾಂಪೌಂಡ್ ವಿಭಾಗದ ಬಿಲ್ಗಾರರು ಒಟ್ಟು ಐದು ಪದಕಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದ್ದರು. ಕೊನೆಯ ದಿನ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಎರಡು ಕಂಚಿನ ಪದಕಗಳು ಭಾರತದ ಪಾಲಾದವು.
ಹಾಲಿ ಒಲಿಂಪಿಕ್ ಚಾಂಪಿಯನ್, 21 ವರ್ಷ ವಯಸ್ಸಿನ ಲಿಮ್ ಸಿಹಿಯೋನ್ ಅವರು ಸರಿಯಾಗಿ ಒಂದು ವರ್ಷ ಹಿಂದೆ ಯಚಿಯೊನ್ ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ ದೀಪಿಕಾ ಅವರನ್ನು ಮಣಿಸಿದ್ದರು. ಭಾನುವಾರವೂ ದಕ್ಷಿಣ ಕೊರಿಯಾದ ಸ್ಪರ್ಧಿ, 12ನೇ ಶ್ರೇಯಾಂಕದ ದೀಪಿಕಾ ಪಾಲಿಗೆ ಒಗಟಾದರು. ಏಕಪಕ್ಷೀಯ ಪಂದ್ಯದಲ್ಲಿ ಸಿಹಿಯೋನ್ 7–1 ರಿಂದ ಗೆದ್ದರು.
ಆದರೆ ಈ ಆಘಾತದಿಂದ ಸುಧಾರಿಸಿಕೊಂಡ 30 ವರ್ಷ ವಯಸ್ಸಿನ ದೀಪಿಕಾ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ದಕ್ಷಿಣ ಕೊರಿಯಾ ಮತ್ತೋರ್ವ ಬಿಲ್ಗಾರ್ತಿ ಕಾಂಗ್ ಚೇ ಅವರನ್ನು 7–3 ರಿಂದ ಮಣಿಸಿದರು.
ಇದು ಆರ್ಚರಿ ವಿಶ್ವಕಪ್‌ಗಳಲ್ಲಿ ಭಾರತದ ಬಿಲ್ಗಾರ್ತಿಗೆ 37ನೇ ಪದಕವಾಗಿದೆ. ಭಾರತದ ಅತ್ಯಂತ ಯಶಸ್ವಿ ಬಿಲ್ಗಾರ್ತಿ ಎಂಬ ಅವರ ಹಿರಿಮೆ ಇನ್ನಷ್ಟ ಗಟ್ಟಿಯಾಯಿತು.
ಪುರುಷರ ವಿಭಾಗದಲ್ಲಿ 21 ವರ್ಷ ವಯಸ್ಸಿನ ಪಾರ್ಥ್ ಸಾಲುಂಖೆ ಅವರು ಸೆಮಿಫೈನಲ್‌ನಲ್ಲಿ 1–7ರಲ್ಲಿ ಅಗ್ರ ಶ್ರೇಯಾಂಕದ ಕೊರಿಯನ್ ದಂತಕಥೆ ಕಿಮ್ ವೂಜಿನ್ ಅವರಿಗೆ ಮಣಿದಿದ್ದರು. ಒಲಿಂಪಿಕ್ಸ್‌ನಲ್ಲಿ ಹಲವು ಪದಕ ಗೆದ್ದಿರುವ ವೂಜಿನ್ ಎದುರು ಸಾಲುಂಖೆ ಕೇವಲ ಒಂದು ಪಾಯಿಂಟ್ ಗಳಿಸಲಷ್ಟೇ ಶಕ್ತರಾಗಿದ್ದರು.
ಆದರೆ ಎದೆಗುಂದದ ಭಾರತದ ಬಿಲ್ಗಾರ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬಾಣಪ್ರಯೋಗ ಮಾಡಿ ತಮಗಿಂತ ಮೇಲಿನ ಕ್ರಮಾಂಕದ ಫ್ರಾನ್ಸ್‌ನ ಆರ್ಚರ್ ಬ್ಯಾಪ್ಟಿಸ್ಟ್ ಆಡಿಸ್ ಅವರನ್ನು 6–4 ರಿಂದ ಸೋಲಿಸಿದರು. ಇದು ಅವರಿಗೆ ವಿಶ್ವಕ್‌ಪನ್ಲಿ ಚೊಚ್ಚಲ ಪದಕ.
ವಿಶ್ವಕಪ್ ಸ್ಟೇಜ್ 3 ಕೂಟ ಜೂನ್ 3 ರಿಂದ 8ರವರೆಗೆ ಟರ್ಕಿಯ ಅಂತಾಲ್ಯದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.