ನವದೆಹಲಿ: ಡಿಫೆಂಡರ್ ಜ್ಯೋತಿ ಸಿಂಗ್ ಅವರು ಸೆ.26ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಮಹಿಳೆಯರ ಜೂನಿಯರ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ 23 ಆಟಗಾರ್ತಿಯರ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ. ಐದೂ ಪಂದ್ಯಗಳು ಕಾನ್ಬೆರಾದ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಜೂನಿಯರ್ ತಂಡವು ಮೊದಲ ಮೂರು ಪಂದ್ಯವನ್ನು ಆಸ್ಟ್ರೇಲಿಯಾ ಜೂನಿಯರ್ ತಂಡದ ವಿರುದ್ಧ ಮತ್ತು ನಂತರದ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾದ ಹಾಕಿ ಒನ್ ಲೀಗ್‌ನಲ್ಲಿ ಸ್ಪರ್ಧಿಸುವ ಕ್ಯಾನ್‌ಬೆರಾ ಚಿಲ್ ವಿರುದ್ಧ ಆಡಲಿದೆ.
ಇದೇ ಡಿಸೆಂಬರ್‌ನಲ್ಲಿ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ಮಹಿಳಾ ಜೂನಿಯರ್ ವಿಶ್ವಕಪ್ 2025 ಟೂರ್ನಿಯ ಪೂರ್ವಸಿದ್ಧತೆಗೆ ಈ ಪ್ರವಾಸ ಭಾರತ ತಂಡಕ್ಕೆ ವೇದಿಕೆಯಾಗಿದೆ.
ಡಿಫೆಂಡರ್‌ಗಳು, ಮಿಡ್‌ಫೀಲ್ಡರ್‌ಗಳು ಮತ್ತು ಫಾರ್ವರ್ಡ್‌ಗಳ ಸಮತೋಲನ ಮಿಶ್ರಣವನ್ನು ಹೊಂದಿರುವ ತಂಡವನ್ನು ಜ್ಯೋತಿ ಮುನ್ನಡೆಸಲಿದ್ದಾರೆ. ಹರಿಯಾಣದ 20 ವರ್ಷದ ಜ್ಯೋತಿ ಅವರು ಈ ವರ್ಷದ ಆರಂಭದಲ್ಲಿ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಸೀನಿಯರ್ ತಂಡದಲ್ಲೂ ಆಡಿದ್ದಾರೆ.
ನಿಧಿ ಮತ್ತು ಇಂಗಿಲ್ ಹರ್ಷ ರಾಣಿ ಮಿಂಜ್ ಗೋಲ್‌ಕೀಪಿಂಗ್ ಜವಾಬ್ದಾರಿ ಹೊತ್ತರೆ; ಡಿಫೆಂಡಿಂಗ್ ವಿಭಾಗದಲ್ಲಿ ಮನೀಷಾ, ಜ್ಯೋತಿ, ಲಾಲ್ ತಾಂಟ್ಲುವಂಗಿ, ಮಮಿತಾ ಓರಾಮ್, ಸಾಕ್ಷಿ ಶುಕ್ಲಾ, ಪೂಜಾ ಸಾಹೂ, ನಂದಿನಿ; ಮಿಡ್‌ಫೀಲ್ಡ್‌ನಲ್ಲಿ ಪ್ರಿಯಾಂಕಾ ಯಾದವ್, ಸಾಕ್ಷಿ ರಾಣಾ, ಖೈಡೆಮ್ ಶಿಲೇಮಾ ಚಾನು, ರಜನಿ ಕೆರ್ಕೆಟ್ಟಾ, ಬಿನಿಮಾ ಧನ್, ಇಶಿಕಾ, ಸುನೆಲಿತಾ ಟೊಪ್ಪೊ, ಅನಿಶಾ ಸಾಹು; ಫಾರ್ವರ್ಡ್ ಲೈನ್‌ನಲ್ಲಿ ಲಾಲ್ ರಿನ್‌ಪುಯಿ, ನಿಶಾ ಮಿಂಜ್, ಪೂರ್ಣಿಮಾ ಯಾದವ್, ಸೋನಮ್, ಕನಿಕಾ ಸಿವಾಚ್ ಮತ್ತು ಸುಖವೀರ್ ಕೌರ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.