ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಲಿನ್‌ ಡಾನ್‌ಗೆ ಸೋಲುಣಿಸಿದ ಶ್ರೀಕಾಂತ್‌

ಪಿಟಿಐ
Published 19 ಅಕ್ಟೋಬರ್ 2018, 18:15 IST
Last Updated 19 ಅಕ್ಟೋಬರ್ 2018, 18:15 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಒಡೆನ್ಸ್‌, ಡೆನ್ಮಾರ್ಕ್‌: ಚೀನಾದ ಬಲಿಷ್ಠ ಆಟಗಾರ ಲಿನ್‌ ಡಾನ್‌ಗೆ ಆಘಾತ ನೀಡಿದ ಭಾರತದ ಕಿದಂಬಿ ಶ್ರೀಕಾಂತ್‌, ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೈನಾ ನೆಹ್ವಾಲ್‌ ಮತ್ತು ಸಮೀರ್‌ ವರ್ಮಾ ಅವರೂ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪೈಪೋಟಿಯಲ್ಲಿ ಶ್ರೀಕಾಂತ್‌ 18–21, 21–17, 21–16ರಿಂದ ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ನಿರಾಸೆ ಕಂಡರು. ಇದರಿಂದ ವಿಚಲಿತರಾಗದ ಭಾರತದ ಆಟಗಾರ ನಂತರ ಮೋಡಿ ಮಾಡಿದರು.

ADVERTISEMENT

ಎರಡನೇ ಗೇಮ್‌ನ ಮೊದಲಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ದ್ವಿತೀಯಾರ್ಧದಲ್ಲಿ ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಶ್ರೀಕಾಂತ್‌ ತಿರುಗೇಟು ನೀಡಿದರು.

ನಿರ್ಣಾಯಕ ಮೂರನೇ ಗೇಮ್‌ನಲ್ಲೂ ಶ್ರೀಕಾಂತ್‌ ಅಬ್ಬರಿಸಿದರು. ಕ್ರಾಸ್‌ಕೋರ್ಟ್ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದ ಅವರು ಗೆಲುವಿನ ತೋರಣ ಕಟ್ಟಿದರು.

ಲಿನ್‌ ಅವರು ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದು, ಐದು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಲಿನ್‌ ಮತ್ತು ಶ್ರೀಕಾಂತ್‌ ನಾಲ್ಕು ಬಾರಿ ಎದುರಾಗಿದ್ದರು. ಈ ಪೈಕಿ ಭಾರತದ ಆಟಗಾರ ಒಮ್ಮೆ ಮಾತ್ರ ಜಯಿಸಿದ್ದರು. 2014ರ ಚೀನಾ ಓಪನ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌, ಭಾರತದವರೇ ಆದ ಸಮೀರ್‌ ವರ್ಮಾ ಎದುರು ಸೆಣಸಲಿದ್ದಾರೆ.ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸಮೀರ್‌ ಎರಡನೇ ಸುತ್ತಿನ ಪೈಪೋಟಿಯಲ್ಲಿ 23–21, 6–21, 22–20ರಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ಎದುರು ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಸೈನಾ ಎರಡನೇ ಸುತ್ತಿನ ಹಣಾಹಣಿಯಲ್ಲಿ 21–15, 21–17ರ ನೇರ ಗೇಮ್‌ಗಳಿಂದ ಜಪಾನ್‌ನ ಅಕಾನೆ ಯಮಗುಚಿಗೆ ಆಘಾತ ನೀಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಯಮಗುಚಿ ವಿರುದ್ಧ ಸೈನಾ ಗೆದ್ದಿದ್ದು ಇದು ಎರಡನೇ ಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.