ADVERTISEMENT

ಡೆನ್ಮಾರ್ಕ್‌ ಓಪನ್: ಲಕ್ಷ್ಯಗೆ ಸೋಲು

ಪಿಟಿಐ
Published 22 ಅಕ್ಟೋಬರ್ 2022, 11:10 IST
Last Updated 22 ಅಕ್ಟೋಬರ್ 2022, 11:10 IST
ಲಕ್ಷ್ಯ ಸೇನ್‌– ಪಿಟಿಐ ಚಿತ್ರ
ಲಕ್ಷ್ಯ ಸೇನ್‌– ಪಿಟಿಐ ಚಿತ್ರ   

ಒಡೆನ್ಸ್: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌, ಭಾರತದ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಯಿತು.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಲಕ್ಷ್ಯ17-21, 12-21ರಿಂದ ಜಪಾನ್‌ನ ಕೊಡಾಯಿ ನರವೊಕಾ ವಿರುದ್ಧ ಎಡವಿದರು.

ಇಬ್ಬರೂ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಬಾರಿ ಮುಖಾಮಖಿಯಾಗಿದ್ದು, ಜಪಾನ್ ಆಟಗಾರ ಎರಡು ಬಾರಿ ಗೆದ್ದಿದ್ದರು. 2018ರ ಯೂತ್ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಲಕ್ಷ್ಯ ಅವರು ನರವೊಕಾ ಅವರನ್ನು ಮಣಿಸಿದ್ದರು.

ADVERTISEMENT

ಈ ಪಂದ್ಯದುದ್ದಕ್ಕೂ ಜಪಾನ್ ಆಟಗಾರ ಉತ್ತಮ ಆಟವಾಡಿದರು. ಮೊದಲ ಗೇಮ್‌ನ ಆರಂಭದಲ್ಲಿ 5–2ರಿಂದ ಮುನ್ನಡೆದ ನರವೊಕಾ, ಬಳಿಕ 13–9ಕ್ಕೆ ಕೊಂಡೊಯ್ದರು. ಒಂದು ಹಂತದಲ್ಲಿ ಲಕ್ಷ್ಯ 15–14ರ ಅಲ್ಪ ಮುನ್ನಡೆ ಗಳಿಸಿದರೂ ಗೇಮ್‌ ತಮ್ಮದಾಗಿಸಿಕೊಳ್ಳುವಲ್ಲಿ ವಿಫಲರಾದರು.

ಎರಡನೇ ಗೇಮ್‌ನ ಆರಂಭದಲ್ಲಿ 5–1ರ ಮುನ್ನಡೆ ಗಳಿಸಿದ ನರವೊಕಾ, ಬಳಿಕ ವಿರಾಮದ ವೇಳೆಗೆ ಅದನ್ನು 11–3ಕ್ಕೆ ಕೊಂಡೊಯ್ದರು. ಬಳಿಕ ಹಿಂದಿರುಗಿ ನೋಡಲಿಲ್ಲ. ಗೇಮ್‌ ಹಾಗೂ ಪಂದ್ಯ ಗೆದ್ದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.