ADVERTISEMENT

ಕ್ರೀಡೆಗಳ ಮರು ಆರಂಭಕ್ಕೆ ದಿಗ್ಗಜರ ಸಂತಸ

ಡಿಎಚ್‌ ಸ್ಪಾರ್ಕ ಸಂವಾದದಲ್ಲಿ ದ್ರಾವಿಡ್, ಅಡ್ವಾಣಿ, ಗೋಪಿಚಂದ್, ಚೆಟ್ರಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 22:07 IST
Last Updated 31 ಜುಲೈ 2020, 22:07 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ಬೆಂಗಳೂರು:ಕೊರೊನಾ ಹಾವಳಿಯಿಂದಾಗಿ ಸುದೀರ್ಘ ಕಾಲ ಸ್ಥಗಿತವಾಗಿದ್ದ ಕ್ರೀಡಾ ಚಟುವಟಿಕೆಗಳು ಮರು ಆರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕ್ರೀಡಾಕ್ಷೇತ್ರದ ದಿಗ್ಗಜರು ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರಕೆ ಡೆಕ್ಕನ್ ಹೆರಾಲ್ಡ್‌ ಆಯೋಜಿಸಿದ್ದ ’ಡಿಎಚ್‌ ಸ್ಪಾರ್ಕ್ಸ್‌‘ ಆನ್‌ಲೈನ್ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್, ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತು ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಭಾಗವಹಿಸಿದ್ದರು. ವೀಕ್ಷಕ ವಿವರಣೆಕಾರ ಚಾರು ಶರ್ಮಾ ಸಂವಾದವನ್ನು ನಿರ್ವಹಿಸಿದರು.

’ಬಹಳ ದಿನಗಳ ನಂತರ ಕ್ರಿಕೆಟ್ ಪಂದ್ಯಗಳನ್ನು ನೇರಪ್ರಸಾರದಲ್ಲಿ ನೋಡಿ ಖುಷಿಯಾಯಿತು. ಜೀವ ಸುರಕ್ಷಾ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯನ್ನು ವೀಕ್ಷಿಸಿದ್ದು ವಿಶೇಷ ಅನುಭವ‘ ಎಂದರು.

ADVERTISEMENT

’ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಈ ಪರಿಸ್ಥಿತಿಯಲ್ಲಿ ಅಂತಹ ಕ್ರಮ ಅನಿವಾರ್ಯವೂ ಅಗಿದೆ. ಭವಿಷ್ಯದಲ್ಲಿ ಇನ್ನಷ್ಟು ಕಾಲ ಇಂತಹ ಕ್ರಮ ಅನಿವಾರ್ಯವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಸರಣಿಯಲ್ಲಿ ಇದನ್ನೆಲ್ಲ ಮಾಡುವುದು ಸಾಧ್ಯವಾಗಿದೆ. ಆದರೆ ನನಗೆ ಜೂನಿಯರ್ ಮತ್ತು ಸ್ಥಳೀಯ ಕ್ರಿಕೆಟ್‌ ನಲ್ಲಿ ಇದು ಅಷ್ಟು ಸುಲಭವಲ್ಲ ಎನ್ನುವ ಆತಂಕ ಕಾಡುತ್ತಿದೆ‘ ಎಂದು ದ್ರಾವಿಡ್ ಹೇಳಿದರು.

’ಐಪಿಎಲ್ ಆಯೋಜನೆ ಮಾಡುವ ಮಾತು ಬಂದಾಗ ಹಣಗಳಿಕೆಗಾಗಿ ಎನ್ನಲಾಗುತ್ತದೆ. ಆದರೆ ಐಪಿಎಲ್‌ನಿಂದ ಬಂದ ಹಣವು ಎಲ್ಲಿ ಹೋಗುತ್ತದೆ ಎಂಬುದನ್ನು ಯೋಚಿಸಬೇಕು. ರಾಜ್ಯ ಕ್ರಿಕೆಟ್‌ ಸಂಸ್ಥೆಗಳು, ದೇಶಿ ಕ್ರಿಕೆಟ್ ಟೂರ್ನಿಗಳಿಗಾಗಿ ವಿನಿಯೋಗವಾಗುತ್ತದೆ. ಜೂನಿಯರ್ ಕ್ರಿಕೆಟ್‌ ಮತ್ತು ಕ್ರಿಕೆಟಿಗರನ್ನು ಪ್ರೋತ್ಸಾಹಿಸಲು ಹಣ ಬೇಕು‘ ಎಂದು ದ್ರಾವಿಡ್ ವಿವರಿಸಿದರು.

’ಅಕ್ಟೋಬರ್‌ ತಿಂಗಳಲ್ಲಿ ಕೊರೊನಾ ವೈರಸ್‌ನ ನೈಜ ರೂಪ ಬಹಿರಂಗವಾಗು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಗ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ ಅದೇ ಸಂದರ್ಭದಲ್ಲಿ ದೇಶಿ ಟೂರ್ನಿಗಳು ಆರಂಭವಾಗಬೇಕು. ಇದೊಂದು ಸವಾಲಿನ ಕೆಲಸ‘ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಚೆಟ್ರಿ, ’ಪ್ರೀಮಿಯರ್ ಲೀಗ್‌ ಫುಟ್‌ಬಾಲ್ ಟೂರ್ನಿಗಳು ನಡೆದವು. ಆದರೆ ಪ್ರೇಕ್ಷಕರಿಲ್ಲ ಕ್ರೀಡಾಂಗಣದಲ್ಲಿ ಆಟ ನಡೆಯುವುದನ್ನು ನೋಡುವುದು ವಿಚಿತ್ರ ಅನುಭವ. ಆದರೆ ಟಿವಿಯಲ್ಲಿ ನೇರಪ್ರಸಾರ ನೋಡಿದಾಗ ಖುಷಿಯಾಗುತ್ತದೆ. ಇಂತಹದೇ ಮಾದರಿಯನ್ನು ಭಾರತದಲ್ಲಿ ನಾವು ಅನುಕರಿಸಲು ಸಾಧ್ಯವೇ? ಈ ಕುರಿತ ನಿರ್ಧಾರವನ್ನು ಸರ್ಕಾರದಿಂದ ಬರಬೇಕು. ಆಗ ಮಾತ್ರ ನಮಗೆ ಟೂರ್ನಿಗಳ ಆಯೋಜನೆಗೆ ರೂಪುರೇಷೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ‘ ಎಂದರು.

ಚೆಟ್ರಿ ಮಾತುಗಳಿಗೆ ಪೂರಕವಾಗಿ ಮಾತನಾಡಿದ ಪಂಕಜ್, ’ಒಳಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ನಡೆಯುವ ಸ್ನೂಕರ್, ಬಿಲಿಯರ್ಡ್ಸ್‌ ಗೇಮ್‌ಗಳನ್ನೂ ಟಿವಿಯಲ್ಲಿ ನೇರಪ್ರಸಾರ ಮಾಡುವ ಬಗ್ಗೆ ಸರ್ಕಾರ ಮತ್ತು ರಾಷ್ಟ್ರೀಯ ಫೆಡರೇಷನ್ ಯೋಚಿಸಬೇಕು‘ ಎಂದರು.

ಬ್ಯಾಡ್ಮಿಂಟನ್ ಅಕಾಡೆಮಿಗಳನ್ನು ತೆರೆಯುವ ಕುರಿತು ಪ್ರತಿಕ್ರಿಯಿಸಿದ ಪುಲ್ಲೇಲ ಗೋಪಿಚಂದ್, ’ಮಾಲ್‌ಗಳು ಮತ್ತು ಪಬ್‌ಗಳನ್ನು ತೆರೆಯಲಾಗಿದೆ. ಆದರೆ ಕ್ರೀಡೆಗಳಿಗೆ ಯಾಕೆ ಅವಕಾಶ ಇಲ್ಲ. ಬೇರೆ ದೇಶಗಳಲ್ಲಿ ಈಗಾಗಲೇ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ನಮ್ಮಲ್ಲಿ ಇನ್ನೂ ಏನೂ ಇಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.