ಬಟುಮಿ (ಜಾರ್ಜಿಯಾ): ಭಾರತದ ದಿವ್ಯಾ ದೇಶಮುಖ್ ಮತ್ತು ಕೊನೇರು ಹಂಪಿ ಅವರು ಭಾನುವಾರ ಫಿಡೆ ಮಹಿಳಾ ವಿಶ್ವಕಪ್ ಚೆಸ್ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದರು.
ವಿಮೆನ್ ಗ್ರ್ಯಾಂಡ್‌ಮಾಸ್ಟರ್ ದಿವ್ಯಾ ಅವರು ಸರ್ಬಿಯಾದ ತಿಯೊಡೊರ ಇಂಜಾಕ್ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದು, ಮುಂದಿನ ಹಂತಕ್ಕೆ ಮುನ್ನಡೆಯಲು ಡ್ರಾ ಅಗತ್ಯವಿತ್ತು. ಅದನ್ನು ಸಾಧಿಸಿದರು.
ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೇರಿದ ದೇಶದ ಮೊದಲ ಆಟಗಾರ್ತಿ ಕೋನೇರು ಹಂಪಿ ಇನ್ನೊಂದು ಪಂದ್ಯದಲ್ಲಿ ಪೋಲೆಂಡ್‌ನ ಕುಲೊನ್ ಕ್ಲಾಡಿಯಾ ಅವರನ್ನು ಸೋಲಿಸಲು ಹೆಚ್ಚು ಶ್ರಮ ಹಾಕಬೇಕಾಯಿತು. ಇವರಿಬ್ಬರ ನಡುವಣ ಮೊದಲ ಪಂದ್ಯ ಡ್ರಾ ಆಗಿತ್ತು. ಪ್ರತಿ ಸುತ್ತಿನಲ್ಲಿ ಎರಡು ಕ್ಲಾಸಿಕಲ್ ಪಂದ್ಯಗಳನ್ನು ಆಡಬೇಕಾಗುತ್ತದೆ. 1–1 ಡ್ರಾ ಆದಲ್ಲಿ ಅಲ್ಪಾವಧಿಯ ಪಂದ್ಯ ಆಡಬೇಕಾಗುತ್ತದೆ.
ಭಾರತದ ಇತರ ಮೂವರು ಆಟಗಾರ್ತಿಯರಾದ ಡಿ.ಹಾರಿಕಾ, ವಂತಿಕಾ ಅಗರವಾಲ್ ಮತ್ತು ಆರ್.ವೈಶಾಲಿ ಅವರೂ ಪ್ರಿಕ್ವಾರ್ಟರ್‌ಫೈನಲ್ ತಲುಪುವ ಅವಕಾಶ ಹೊಂದಿದ್ದು, ಟೈಬ್ರೇಕ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಹಾರಿಕಾ, ಗ್ರೀಸ್‌ನ ಸೊಲಾಕಿಡೊ ಸ್ಟಾವ್ರೊಲಾ ವಿರುದ್ಧ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ, ಮೊದಲ ಪಂದ್ಯ ಗೆದ್ದಿದ್ದ ವಂತಿಕಾ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಎದುರಿನ ಮರು ಪಂದ್ಯ ಸೋತಿದ್ದರಿಂದ ಪಂದ್ಯ 1–1 ಸಮನಾಯಿತು.
ಟೂರ್ನಿಯು ₹6 ಕೋಟಿ ಬಹುಮಾನ ಮೊತ್ತ ಹೊಂದಿದ್ದು, ಪ್ರಶಸ್ತಿ ಗೆಲ್ಲುವ ಆಟಗಾರ್ತಿ ₹43 ಲಕ್ಷ ತಮ್ಮದಾಗಿಸಿಕೊಳ್ಳಲಿದ್ದಾರೆ.
ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಚಾಲೆಂಜರ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಒಟ್ಟು ಎಂಟು ಆಟಗಾರ್ತಿಯರು ಪಾಲ್ಗೊಳ್ಳುವ ಚಾಲೆಂಜರ್ ಟೂರ್ನಿಯ ವಿಜೇತರು ವಿಶ್ವ ಚಾಂಪಿಯನ್ (ಪ್ರಸ್ತುತ ಚೀನಾದ ಜು ವೆನ್ಜುನ್) ಅವರಿಗೆ ಸವಾಲು ಹಾಕುವ ಅವಕಾಶ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.