ನಾಗ್ಪುರ: ಫಿಡೆ ಮಹಿಳಾ ವಿಶ್ವಕಪ್ ಗೆದ್ದ ದಿವ್ಯಾ ದೇಶಮುಖ್ ಅವರ ಇಲ್ಲಿನ ನಿವಾಸಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಶನಿವಾರ ಭೇಟಿ ನೀಡಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಮಹಿಳಾ ಚೆಸ್ ವಿಶ್ವ ಕಪ್ ಗೆದ್ದ ಅತಿ ಕಿರಿಯ ಆಟಗಾರ್ತಿಯರೆಂಬ ಹಿರಿಮೆಗೆ 19 ವರ್ಷ ವಯಸ್ಸಿನ ದಿವ್ಯಾ ಪಾತ್ರರಾಗಿದ್ದರು. ಈ ವೇಳೆ ಅವರು ದಿವ್ಯಾ ಕುಟುಂಬದ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಅಮರಾವತಿಯವರು. ದಿವ್ಯಾ ಅವರ ಅಜ್ಜ ಡಾ.ಕೆ.ಜಿ.ದೇಶಮುಖ್ ಅವರು ಈ ಹಿಂದೆ ಅಮರಾವತಿಯ ಸಂತ ಗಾಡ್ಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.
‘ಕುಲಪತಿ ಮತ್ತು ನಾನು ಆತ್ಮೀಯ ಸ್ನೇಹಿತರಾಗಿದ್ದೆವು. ನಾವು ಒಂದೇ ಕುಟುಂಬದಂತೆ ಇದ್ದೆವು. ನಾನು 50–55 ವರ್ಷಗಳ ಹಿಂದಿನ ವರ್ಷಗಳಿಗೆ ಮರಳಿ ಭಾವುಕನಾದೆ. ಹಲವು ವರ್ಷಗಳ ನಂತರ ಆಗ ಸಮ್ಮಿಲನ ಇದು. ನಾವೆಲ್ಲ ಹೆಮ್ಮೆಪಟ್ಟುಕೊಳ್ಳುವಂತೆ ಆಡಿದ ದಿವ್ಯಾ ಅವರನ್ನು ಅಭಿನಂದಿಸಲು ನಾನು ವಿಶೇಷವಾಗಿ ಬಂದೆ’ ಎಂದು ಗವಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರು ಶುಕ್ರವಾರ ದಿವ್ಯಾ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದರು.
ದಿವ್ಯಾಗೆ ₹3 ಕೋಟಿ ಬಹುಮಾನ
ನಾಗ್ಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಹಿಳಾ ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಅವರಿಗೆ ನಗದು ಬಹುಮಾನವಾಗಿ ₹3 ಕೋಟಿ ಮೊತ್ತದ ಚೆಕ್ ಹಸ್ತಾಂತರಿಸಿದರು. ಜಾರ್ಜಿಯಾದ ಬಟುಮಿಯಲ್ಲಿ ಅವರು ಸ್ವದೇಶದ ಕೋನೇರು ಹಂಪಿ ಅವರನ್ನು ಜುಲೈ 28ರಂದು ನಡೆದ ಫೈನಲ್‌ನ ಟೈಬ್ರೇಕರ್‌ನಲ್ಲಿ ಮಣಿಸಿ ವಿಶ್ವಕಪ್ ಚಾಂಪಿಯನ್ ಆಗಿದ್ದರು. ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೂ ಏರಿದ್ದರು. ಮುಖ್ಯಮಂತ್ರಿ ಫಡಣವೀಸ್ ಅವರೂ ನಾಗ್ಪುರದವರು. ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ಈ ಬಹುಮಾನ ನೀಡಲಾಯಿತು. ದಿವ್ಯಾ ಅವರಿಗೆ ಸಾಧನೆ ಮುಂದುವರಿಸಲು ಮುಂದೆಯೂ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದರು. ಕ್ರೀಡಾ ಸಚಿವ ಮಾಣಿಕರಾವ್ ಕೋಕಟೆ ಈ ವೇಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.