ಬಟುಮಿ (ಜಾರ್ಜಿಯಾ): ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ ಭಾರತದ ಇಂಟರ್‌ನ್ಯಾಷನಲ್ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಮೂರನೇ ಶ್ರೇಯಾಂಕದ ತಾನ್ ಝೊಂಗ್ವಿ ಅವರನ್ನು ಮಣಿಸಿ ಫಿಡೆ ಮಹಿಳಾ ವಿಶ್ವ ಕಪ್ ಚೆಸ್ ಟೂರ್ನಿಯ ಫೈನಲ್ ತಲುಪಿದರು.
ಸೆಮಿಫೈನಲ್‌ನಲ್ಲಿ ನಾಗ್ಪುರದ ಆಟಗಾರ್ತಿ 1.5–0.5 ರಿಂದ ಜಯಗಳಿಸಿದರು. ಬುಧವಾರ ನಡೆದ ಸೆಮಿಫೈನಲ್ ಪಂದ್ಯದ ಎರಡನೇ ಕ್ಲಾಸಿಕಲ್ ಆಟದಲ್ಲಿ, ಬಿಳಿ ಕಾಯಿಗಳಲ್ಲಿ ಆಡಿದ ದಿವ್ಯಾ 91 ದೀರ್ಘ ನಡೆಗಳ ನಂತರ ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಸೋಲಿಸಿದರು. ಮಂಗಳವಾರ ನಡೆದ ಮೊದಲ ಕ್ಲಾಸಿಕಲ್ ಪಂದ್ಯ ಡ್ರಾ ಆಗಿತ್ತು.
ಆಟ ಅಂತಿಮ ಹಂತ ತಲುಪುತ್ತಿದ್ದಂತೆ ಎರಡು ಪಾನ್‌ಗಳನ್ನು (ಕಾಲಾಳು) ಹೆಚ್ಚುವರಿಯಾಗಿ ಹೊಂದಿದ್ದ ದಿವ್ಯಾ ಅದರ ಲಾಭ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು.
ನಾಲ್ಕನೇ ಶ್ರೇಯಾಂಕದ ಕೋನೇರು ಹಂಪಿ ಮತ್ತು ಅಗ್ರ ಶ್ರೇಯಾಂಕದ ಟಿಂಗ್ಜಿ ಲೀ ನಡುವಣ ಇನ್ನೊಂದು ಸೆಮಿಫೈನಲ್ ಪಂದ್ಯ 1–1 ಡ್ರಾ ಆಯಿತು. ಮೊದಲ ಪಂದ್ಯ ಬೇಗ ಡ್ರಾ ಆದರೆ, ಬುಧವಾರ ಎರಡನೇ ಪಂದ್ಯ 75 ನಡೆಗಳನ್ನು ಕಂಡಿತು. ಸೆಮಿಫೈನಲ್ ವಿಜೇತರನ್ನು ನಿರ್ಧರಿಸಲು ಗುರುವಾರ ಅಲ್ಪಾವಧಿಯ ಸೆಮಿಫೈನಲ್ ಪಂದ್ಯಗಳನ್ನು ಆಡಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.