ADVERTISEMENT

ಬರಲಿದೆ ಧ್ಯಾನ್ ಚಂದ್ ಸಾಕ್ಷ್ಯಚಿತ್ರ

ಪಿಟಿಐ
Published 18 ಮೇ 2021, 20:23 IST
Last Updated 18 ಮೇ 2021, 20:23 IST
ಧ್ಯಾನ್ ಚಂದ್‌
ಧ್ಯಾನ್ ಚಂದ್‌   

ನವದೆಹಲಿ: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಲು ಉದ್ಯಮಿ ಹಾಗೂ ನಿರ್ಮಾಪಕರಾದ ಜೊಯೀತಾ ರಾಯ್ ಮತ್ತು ಪ್ರತೀಕ್ ಕುಮಾರ್ ಮಿಶ್ರಾ ಮುಂದಾಗಿದ್ದಾರೆ. ಧ್ಯಾನ್‌ಚಂದ್‌ ಅವರ ಬಾಲ್ಯ ಮತ್ತು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಇದರಲ್ಲಿ ಬಿಂಬಿಸಲಾಗುತ್ತದೆ ಎನ್ನಲಾಗಿದೆ.

ಧ್ಯಾನ್ ಚಂದ್ ಅವರಿಗೆ ಭಾರತರತ್ನ ನೀಡಬೇಕೆಂದು ಜೊಯೀತಾ ಮತ್ತು ಪ್ರತೀಕ್ ಕೆಲವು ವರ್ಷಗಳಿಂದ ಆನ್‌ಲೈನ್‌ ಮೂಲಕ ಅಭಿಯಾನ ಮಾಡುತ್ತಿದ್ದಾರೆ. ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿ ಧ್ಯಾನ್‌ಚಂದ್ ಅವರ ಪುತ್ರ ಹಾಗೂ ಹಾಕಿ ಆಟಗಾರ ಅಶೋಕ್ ಧ್ಯಾನ್ ಚಂದ್‌ ಜೊತೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಝಾನ್ಸಿ ಮತ್ತು ಅಲಹಾಬಾದ್‌ನಲ್ಲಿ ಕಳೆದ ವರ್ಷ ಶೂಟಿಂಗ್ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಅಡ್ಡಿಯಾಗಿದೆ ಎಂದು ತಿಳಿಸಲಾಗಿದೆ. ಜೂನ್‌ನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಡಿಸೆಂಬರ್ ಮೂರರಂದು ಬಿಡುಗಡೆ ಮಾಡುವ ಯೋಜನೆ ಇದೆ. ಅಂದಿಗೆ ಧ್ಯಾನ್ ಚಂದ್ ನಿಧನರಾಗಿ 42 ವರ್ಷಗಳಾಗಲಿವೆ.

ADVERTISEMENT

ಭಾರತ ಹಾಕಿ ಕಂಡ ಅದ್ಭುತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಧ್ಯಾನ್ ಚಂದ್ 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1926ರಿಂದ 1949ರ ವರೆಗೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 185 ಪಂದ್ಯಗಳಲ್ಲಿ 570 ಗೋಲು ಗಳಿಸಿದ್ದಾರೆ.

1956ರಲ್ಲಿ ಪದ್ಮಭೂಷಣ ಪುರಸ್ಕಾರ ಲಭಿಸಿರುವ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.