ADVERTISEMENT

ಕುಸ್ತಿ: ಫೈನಲ್‌ ತಲುಪಿದ ರಾಧಿಕಾ 

ಪಿಟಿಐ
Published 13 ಏಪ್ರಿಲ್ 2024, 16:01 IST
Last Updated 13 ಏಪ್ರಿಲ್ 2024, 16:01 IST
ಭಾರತ ಕುಸ್ತಿ ಫೆಡರೇಷನ್‌
ಭಾರತ ಕುಸ್ತಿ ಫೆಡರೇಷನ್‌   

ಬಿಷ್ಕೆಕ್‌ (ಕಿರ್ಗಿಸ್ತಾನ): ರಾಧಿಕಾ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 68 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. 

ಕಳೆದ ವರ್ಷ 23 ವರ್ಷದೊಳಗಿನ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ರಾಧಿಕಾ, 2022ರಲ್ಲಿ ಸೀನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ತಮ್ಮ ತೂಕ ವಿಭಾಗದಲ್ಲಿ ಪ್ರಬಲ ಪ್ರದರ್ಶನ ನೀಡಿದರು.

ಮೊದಲ ಸುತ್ತಿನಲ್ಲಿ ಕಜಕಸ್ತಾನದ ಅಲ್ಬಿನಾ ಕೈರ್‌ಗೆಲ್ಡಿನೋವಾ ವಿರುದ್ಧ ತಾಂತ್ರಿಕ ಕೌಶಲದ ಆಧಾರದಲ್ಲಿ ಮೊದಲ ಪಂದ್ಯ ಗೆದ್ದರು. ನಂತರ ಕಿರ್ಗಿಸ್ತಾನ್‌ದ ಗುಲ್ನುರಾ ತಶ್ತಾನ್‌ಬೆಕೊವಾ ಅವರನ್ನು ‘ಚಿತ್‌’ ಮಾಡಿದರು. ಅವರು ಈಗ ಚಿನ್ನದ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಜಪಾನ್‌ನ ನೊನೊಕಾ ಒಜಾಕಿ ಅವರನ್ನು ಎದುರಿಸಲಿದ್ದಾರೆ.

ADVERTISEMENT

ಶಿವಾನಿ ಪವಾರ್ (50 ಕೆ.ಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಜಿಕಿ ಫೆಂಗ್‌ ವಿರುದ್ಧ ಸೋತರು. ಆದರೆ ಚೀನಾದ ಸ್ಪರ್ಧಿ ಫೈನಲ್‌ ಪ್ರವೇಶಿಸಿದ ನಂತರ (ರಿಪೇಜ್‌) ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದರು.

55 ಕೆ.ಜಿ ವಿಭಾಗದಲ್ಲಿ ತಮನ್ನಾ ಅರ್ಹತಾ ಸುತ್ತಿನಲ್ಲಿ ಮೋ ಕಿಯೂಕಾ ವಿರುದ್ಧ 0-9 ಅಂತರದಿಂದ ಸೋತರು. ಆದರೆ, ಜಪಾನಿನ ಸ್ಪರ್ಧಿ ಫೈನಲ್ ತಲುಪಿದ ನಂತರ, ಭಾರತದ ಸ್ಪರ್ಧಿ ಪದಕದ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು.

ಪುಷ್ಪಾ ಯಾದವ್ (59 ಕೆ.ಜಿ) ಮತ್ತು ಪ್ರಿಯಾ (76 ಕೆ.ಜಿ) ಅವರನ್ನು ಸೋಲಿಸಿದ ಎದುರಾಳಿಗಳು ಫೈನಲ್ ತಲುಪಿರುವ ಕಾರಣ ಅವರಿಗೂ ಕಂಚಿನ ಪದಕದ ಅವಕಾಶ ಜೀವಂತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.