ADVERTISEMENT

ಸಂಜಿತಾ ಚಾನುಗೆ ಈ ವರ್ಷ ಅರ್ಜುನ ಪ್ರಶಸ್ತಿ ಖಚಿತ

ಪಿಟಿಐ
Published 25 ಜೂನ್ 2020, 10:50 IST
Last Updated 25 ಜೂನ್ 2020, 10:50 IST
ಸಂಜಿತಾ ಚಾನು –ಪಿಟಿಐ ಚಿತ್ರ
ಸಂಜಿತಾ ಚಾನು –ಪಿಟಿಐ ಚಿತ್ರ   

ನವದೆಹಲಿ: ಸುದೀರ್ಘ ಹೋರಾಟದಲ್ಲಿ ವೇಟ್‌ಲಿಫ್ಟರ್ ಸಂಜಿತಾ ಚಾನು ಕೊನೆಗೂ ಗೆದ್ದಿದ್ದಾರೆ. 2018ರಿಂದ ತಡೆಹಿಡಿಯಲಾಗಿದ್ದ ಅರ್ಜುನ ಪ್ರಶಸ್ತಿ ಈ ಬಾರಿ ಅವರಿಗೆ ಸಿಗುವುದು ಖಚಿತವಾಗಿದೆ.ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ಸಂಜಿತಾ ಮೇಲೆ ಉದ್ದೀಪನ ಮದ್ದು ಸೇವನೆ ಆರೋಪ ಇದ್ದ ಕಾರಣ ಪ್ರಶಸ್ತಿ ಕೈಸೇರಿರಲಿಲ್ಲ. ಇತ್ತೀಚೆಗೆ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಅವರನ್ನು ಆರೋಪಮುಕ್ತಗೊಳಿಸಿತ್ತು.

ಅರ್ಜುನ ಪ್ರಶಸ್ತಿಗೆ ಸಂಜಿತಾ ಅವರನ್ನು ಪರಿಗಣಿಸುವಂತೆಯೂ ಆ ನಿರ್ಣಯ ಒಳಗೊಂಡ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಅವರು ಉದ್ದೀಪನ ಮದ್ದು ಸೇವನೆ ಆರೋಪದಿಂದ ಮುಕ್ತರಾಗುವ ವರೆಗೂ ಇರಿಸುವಂತೆಯೂ 2018ರಲ್ಲಿ ದೆಹಲಿ ಹೈಕೋರ್ಟ್ ಆಯ್ಕೆ ಸಮಿತಿಗೆ ಸೂಚಿಸಿತ್ತು. ಇದರ ಪ್ರಕಾರ ಅವರನ್ನು ಈ ಬಾರಿ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

2017ರಲ್ಲಿ ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದರಿಂದ ಬೇಸರಗೊಂಡ ಚಾನು ದೆಹಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾದ ಸುದ್ದಿ 2018ರ ಮೇ ತಿಂಗಳಲ್ಲಿ ಹೊರಬಿದ್ದಿತ್ತು. ಆದರೆ ಅದೇ ವರ್ಷ ಆಗಸ್ಟ್‌ನಲ್ಲಿ ಹೈಕೋರ್ಟ್‌ ಆಯ್ಕೆ ಸಮಿತಿಗೆ ಸೂಚನೆ ನೀಡಿತ್ತು.

ADVERTISEMENT

ಸಾಕಷ್ಟು ಪುರಾವೆಗಳು ಇಲ್ಲದ ಕಾರಣ ಚಾನು ಅವರನ್ನು ಆರೋಪದಿಂದ ಮುಕ್ತಗೊಳಿಸಲು ಅಂತರರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ನಿರ್ಧರಿಸಿತ್ತು. ವಿಶ್ವ ಉದ್ದೀಪನ ಮದ್ದು ತಡೆ ಘಟಕದ (ವಾಡಾ) ಶಿಫಾರಸಿನ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅದು ತಿಳಿಸಿತ್ತು. ಆದರೆ ಇಷ್ಟು ವರ್ಷ ಅನುಭವಿಸಿದ ನೋವಿಗೆ ಪರಿಹಾರ ನೀಡಬೇಕು ಎಂದು ಮಣಿಪುರದ ಚಾನು ಇತ್ತೀಚೆಗೆ ಒತ್ತಾಯಿಸಿದ್ದರು.

ಸಂಜಿತಾ ಅವರಿಗೆ ಈಗ 26 ವರ್ಷ. 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಮವಾಗಿ 48 ಮತ್ತು 53 ಕೆಜಿ ವಿಭಾಗದಲ್ಲಿ ಅವರು ಚಿನ್ನ ಗಳಿಸಿದ್ದರು. 2016 ಮತ್ತು 2017ರಲ್ಲಿ ಸತತವಾಗಿ ಅರ್ಜುನ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ ಆಯ್ಕೆ ಸಮಿತಿ ಅವರನ್ನು ನಿರಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.