
ನವದೆಹಲಿ: ಒಲಿಂಪಿಯನ್ ಇಳವೆನಿಲ್ ವಳರಿವನ್ ಅವರು ಜಪಾನ್‌ನ ಮಿಸಾಕಿ ನೊಬೊಟಾ ಅವರ ಪ್ರಬಲ ಸವಾಲನ್ನು ಎದುರಿಸಿ, ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 10 ಮೀ. ಏರ್ ರೈಫಲ್ ಚಿನ್ನ ಗೆದ್ದರು. ಮೇಘನಾ ಸಜ್ಜನರ್ ಅವರು ಕಂಚಿನ ಪದಕ ಗೆದ್ದುಕೊಂಡರು.
ಕರ್ನಿಸಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಇಳವೆನಿಲ್, ಆರ್ಯಾ ಬೋರ್ಸೆ ಮತ್ತು ಮೇಘನಾ ಸಜ್ಜನರ್ ಅವರರಿದ್ದ ತಂಡವು ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.
ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಶಾಂಭವಿ ಕ್ಷೀರಸಾಗರ್ ಅವರು 253.7 ಸ್ಕೋರ್‌ನೊಡನೆ ಏಷ್ಯನ್ ಜೂನಿಯರ್ ಫೈನಲ್ಸ್ ದಾಖಲೆ ಮುರಿದರು. ಭಾರತದ ಮೂರೂ ಪದಕಗಳನ್ನು ಬಾಚಿಕೊಂಡಿತು. ಮಾನ್ಯತಾ ಸಿಂಗ್ (249.7) ಮತ್ತು ಅನೀಶಾ ಶರ್ಮಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಶಾಂಭವಿ ಅವರು 2024ರಲ್ಲಿ ಇಶಾ ನಿಲ್ ತಕ್ಸಾಲೆ (253.1) ಜಕಾರ್ತಾ ಕೂಟದಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು.
ಶಾಂಭವಿ, ಅನೀಶಾ, ಸಾಂದ್ರತಾ ರಾಯ್ ಅವರಿದ್ದ ಭಾರತ ತಂಡವು ಟೀಮ್ ವಿಭಾಗದಲ್ಲೂ ಚಿನ್ನ ಗೆದ್ದುಕೊಂಡಿತು. ಕಜಾಕಸ್ತಾನ ಎರಡನೇ ಸ್ಥಾನ ಪಡೆಯಿತು. ಇಳೆವನಿಲ್ 252 ಸ್ಕೋರ್ ದಾಖಲಿಸಿದರೆ, ಜಪಾನ್‌ನ ಮಿಸಾಕಿ 251.5 ಸ್ವಲ್ಪದರಲ್ಲೇ ಎರಡನೇ ಸ್ಥಾನಕ್ಕೆ ಸರಿಯಬೇಕಾಯಿತು. ಮೇಘನಾ 229.5 ಸ್ಕೋರ್ ದಾಖಲಿಸಿದರು.
ಪಿಸ್ತೂಲ್ ವಿಭಾಗದ 50 ಮೀ. ಸ್ಪರ್ಧೆಯಲ್ಲಿ ಮೂರೂ ಪದಕಗಳು ಭಾರತದ ಪಾಲಾದವು. ಸೌರಭ್ ಚೌಧರಿ ಚಿನ್ನ ಗೆದ್ದರೆ, ಕಮಲಜೀತ್ ಚೌಧರಿ ಮತ್ತು ಹಾಲಿ ವಿಶ್ವ ಚಾಂಪಿಯನ್ ರವಿಂದರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಜೂನಿಯರ್ ವಿಭಾಗದಲ್ಲಿ ಯೋಗೇಶ್ ಕುಮಾರ್ ಚಿನ್ನ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.