ADVERTISEMENT

ಒಲಿಂಪಿಕ್ಸ್‌ಗೆ ಭಾರತದ ಶೂಟರ್‌ಗಳ ಅಭ್ಯಾಸ

ಇಂದಿನಿಂದ ಯೂರೋಪಿಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌

ಪಿಟಿಐ
Published 23 ಮೇ 2021, 12:57 IST
Last Updated 23 ಮೇ 2021, 12:57 IST
ಅಪೂರ್ವಿ ಚಾಂಡೇಲ–ಪಿಟಿಐ ಚಿತ್ರ
ಅಪೂರ್ವಿ ಚಾಂಡೇಲ–ಪಿಟಿಐ ಚಿತ್ರ   

ಒಸಿಜೆಕ್, ಕ್ರೊವೇಷ್ಯಾ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವವರು ಸೇರಿದಂತೆ ಭಾರತದ ಶೂಟರ್‌ಗಳು ಯೂರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಸೋಮವಾರ ಇಲ್ಲಿ ಟೂರ್ನಿ ಆರಂಭವಾಗಲಿದ್ದು, ಭಾರತದ ಶೂಟರ್‌ಗಳು ಆತಿಥಿ ಅಥ್ಲೀಟ್‌ಗಳಾಗಿ ಆಹ್ವಾನಿತರಾಗಿದ್ದಾರೆ. ಆದಾಗ್ಯೂ ಕನಿಷ್ಠ ಅರ್ಹತಾ ಸ್ಕೋರ್ (ಎಂಕ್ಯೂಎಸ್‌) ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. ಇಲ್ಲಿ ಅವರು ಗಳಿಸುವ ಪಾಯಿಂಟ್‌ಗಳನ್ನು ಫೈನಲ್ಸ್ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ. ಹೀಗಾಗಿ ‘ಪೋಡಿಯಂ ಫಿನಿಶ್‘ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಆದರೆ ಜುಲೈನಲ್ಲಿ ನಿಗದಿಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆಯಾಗಿ ಈ ಚಾಂಪಿಯನ್‌ಷಿಪ್‌ ಭಾರತದ ಶೂಟರ್‌ಗಳಿಗೆ ಉತ್ತಮ ವೇದಿಕೆಯಾಗಿದೆ.

ADVERTISEMENT

ಪುರುಷರ 10 ಮೀಟರ್ ಏರ್ ರೈಫಲ್‌ ಎಂಕ್ಯೂಎಸ್‌ ವಿಭಾಗದಲ್ಲಿ ಭಾರತದ ದೀಪಕ್ ಕುಮಾರ್, ದಿವ್ಯಾಂಶ್ ಸಿಂಗ್ ಪನ್ವರ್‌ ಹಾಗೂ ಐಶ್ವರಿಪ್ರತಾಪ್ ಸಿಂಗ್ ತೋಮರ್ ಕಣಕ್ಕಿಳಿಯಲಿದ್ದಾರೆ. ಅಪೂರ್ವಿ ಚಾಂಡೇಲ ಹಾಗೂ ಇಳವೆನ್ನಿಲ ವಾಳರಿವನ್ ಅವರು ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪಾಲ್ಗೊಳ್ಳುವರು.

ಅಭಿಷೇಕ್ ವರ್ಮಾ ಹಾಗೂ ಸೌರಭ್ ಚೌಧರಿ ಅವರು ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮತ್ತು ಮನು ಭಾಕರ್‌ ಹಾಗೂ ಯಶಸ್ವಿನಿ ಸಿಂಗ್ ದೇಸ್ವಾಲ್ ಅವರು ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಅದೃಷ್ಟಪರೀಕ್ಷಿಸಲಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ 13 ಮಂದಿಯ ತಂಡವು ಸದ್ಯ ಕ್ರೊವೇಷ್ಯಾದ ರಾಜಧಾನಿ ಜಾಗ್ರೇಬ್‌ನಲ್ಲಿ ತಂಗಿದ್ದು, ಸ್ಪರ್ಧೆಗಾಗಿ ಶನಿವಾರ ಒಸಿಜೆಕ್‌ಗೆ ಆಗಮಿಸಿದೆ.

ಭಾರತದ ಶೂಟರ್‌ಗಳು ಪುರುಷ ಮತ್ತು ಮಹಿಳೆಯರ ವೈಯಕ್ತಿಕ ಒಲಿಂಪಿಕ್‌ ಸ್ಪರ್ಧೆಗಳಲ್ಲಿ ಮಾತ್ರ ಪಾಲ್ಗೊಳ್ಳುವರು. ಯೂರೋಪಿಯನ್‌ ಚಾಂಪಿಯನ್‌ಷಿಪ್ ಬಳಿಕ ಜೂನ್ 22ರಿಂದ ವಿಶ್ವಕಪ್ ಶೂಟಿಂಗ್ ಟೂರ್ನಿಗೂ ಒಸಿಜೆಕ್ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.