ಬೆಂಗಳೂರು: ವೇಗದ ಓಟಗಾರರಾದ ಅಮ್ಲನ್ ಬೋರ್ಗೊಹೈನ್ ಮತ್ತು ಜ್ಯೋತಿ ಯರಾಜಿ ಅವರು ಶುಕ್ರವಾರ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಥಮ ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಏಪ್ರಿಲ್ 21ರಿಂದ 24ರವರೆಗೆ ನಡೆಯಲಿರುವ 28ನೇ ರಾಷ್ಟ್ರೀಯ ಫೆಡರೇಷನ್ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಈ ಗ್ರ್ಯಾನ್‌ಪ್ರಿ ಕೂಟವು ಮಹತ್ವದ್ದಾಗಿದೆ. ಆದರೆ ದೇಶದ ಪ್ರಮುಖ ಅಥ್ಲೀಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭಾಗವಹಿಸುತ್ತಿಲ್ಲ. ಬೆರಳೆಣಿಕೆಯಷ್ಟು ಪ್ರಮುಖರು ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲಿ ಅಮ್ಲನ್ (ಪುರುಷರ 100 ಮೀ, 200 ಮೀ ಓಟ), ಜ್ಯೋತಿ (ಮಹಿಳೆಯರ 200 ಮೀ, 100 ಮೀ ಹರ್ಡಲ್ಸ್), ಜಿಗಿತ ವಿಭಾಗದ ಅಥ್ಲೀಟ್‌ಗಳಾದ ಮೊಹಮ್ಮದ್ ಅನೀಸ್ ಯಾಹ್ಯಾ ಮತ್ತು ಪ್ರವೀಣ ಚಿತ್ರವೆಲ್ (ಲಾಂಗ್ ಜಂಪ್) ಕಣದಲ್ಲಿದ್ದಾರೆ.
26 ವರ್ಷದ ವಯಸ್ಸಿನ ಅಮ್ಲನ್ ಅವರು ಅಸ್ಸಾಂ ರಾಜ್ಯದವರು. 100 ಮೀ ಓಟದಲ್ಲಿ 10.25ಸೆಕೆಂಡು ಮತ್ತು 200 ಮೀ ಓಟದಲ್ಲಿ 20.52 ಸೆಕೆಂಡುಗಳ ದಾಖಲೆಯನ್ನು 2022ರಲ್ಲಿ ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಅವರು ತಮ್ಮ ಸಾಮರ್ಥ್ಯಕ್ಕೆ ಮಾಡಿದ ಪ್ರಯತ್ನಗಳು ಫಲ ಕೊಟ್ಟಿಲ್ಲ. ಆದ್ದರಿಂದ ಈ ಬಾರಿ ಅವರು ತಮ್ಮ ಶ್ರೇಷ್ಠ ಪ್ರದರ್ಶನ ನೀಡುವ ಛಲದಲ್ಲಿದ್ದಾರೆ. ಈಚೆಗೆ ಡೆಹ್ರಾಡೂನ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಮ್ಲನ್ ಕಂಚು (10.43ಸೆ) ಗೆದ್ದಿದ್ದರು.
ಮಹಿಳೆಯರ ಹರ್ಡಲ್ಸ್‌ನಲ್ಲಿ ಜ್ಯೋತಿ ಅವರು ಪ್ರಸ್ತುತ ಪ್ರಮುಖ ಅಥ್ಲೀಟ್ ಆಗಿದ್ದಾರೆ. ಆಂಧ್ರಪ್ರದೇಶದ ಜ್ಯೋತಿ ಅವರು ಇದೇ ವರ್ಷ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. 100 ಮೀ ಹರ್ಡಲ್ಸ್‌ನಲ್ಲಿ ಅರ್ಹತಾ ಸಮಯವು 12.73 ಸೆಕೆಂಡುಗಳಾಗಿದೆ. ಜ್ಯೋತಿ ಅವರು 12.78 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.
ಪುರುಷರ ಲಾಂಗ್‌ಜಂಪ್‌ನಲ್ಲಿ ಯಾಹ್ಯಾ ಮತ್ತು ಚಿತ್ರವೇಲ್ ಅವರಿಬ್ಬರ ನಡುವೆ ಪೈಪೋಟಿ ಇದೆ. ಚಿತ್ರವೇಲ್ ಅವರು ಟ್ರಿಪಲ್ ಜಂಪ್ ದಾಖಲೆ ಕೂಡ ಹೊಂದಿದ್ದಾರೆ.
ಆತಿಥೇಯ ಕರ್ನಾಟಕ ತಂಡದಲ್ಲಿ ಒಟ್ಟು 30 ಅಥ್ಲೀಟ್‌ಗಳಿದ್ದಾರೆ. ಅದರಲ್ಲಿ ಓಟದ ವಿಭಾಗದಲ್ಲಿ ಎ.ಟಿ. ದಾನೇಶ್ವರಿ, ಎಸ್.ಎಸ್. ಸ್ನೇಹಾ, ಹೈಜಂಪ್ ಅಥ್ಲೀಟ್ ಅಭಿನಯಾ ಎಸ್ ಶೆಟ್ಟಿ ಮತ್ತು ಜೆಸಿ ಸಂದೇಶ್ ಪ್ರಮುಖರಾಗಿದ್ದಾರೆ.
ಒಂದು ದಿನದ ಈ ಕೂಟದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ 10 ಸ್ಪರ್ಧೆಗಳು ನಡೆಯಲಿವೆ. ಟ್ರ್ಯಾಕ್‌ನಲ್ಲಿ 100 ಮೀ, 200 ಮೀ, 100 ಮೀ ಹರ್ಡಲ್ಸ್, 110 ಮೀ ಹರ್ಡಲ್ಸ್, 800 ಮೀ, 5000 ಮೀ; ಫೀಲ್ಡ್‌ನಲ್ಲಿ ಲಾಂಗ್ ಜಂಪ್, ಹೈಜಂಪ್, ಪೋಲ್‌ವಾಲ್ಡ್, ಶಾಟ್ ಪಟ್, ಜಾವೆಲಿನ್ ಥ್ರೋ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.