ಐಲ್ ಆಫ್ ಮ್ಯಾನ್: ಭಾರತದ ವೈಶಾಲಿ ಆರ್. ಮತ್ತು ರಷ್ಯಾದ ಕ್ಯಾತರಿನಾ ಲಾಗ್ನೊ ಅವರು ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ತಲಾ ಐದು ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಓಪನ್ ವಿಭಾಗದಲ್ಲಿ ಇರಾನ್‌ನ ಪರ್ಹಾಮ್ ಮಘಸೂಡ್ಲು ಅರ್ಧ ಪಾಯಿಂಟ್ ಅಂತರದಿಂದ ಅಗ್ರಸ್ಥಾನದಲ್ಲಿದ್ದಾರೆ.
25 ವರ್ಷ ವಯಸ್ಸಿನ ಮಘಸೂಡ್ಲು (5) ಮೊದಲ ಬೋರ್ಡ್‌ನಲ್ಲಿ ಭಾರತದ ಅರ್ಜುನ್ ಇರಿಗೇಶಿ ಜೊತೆ ಅಂಕ ಹಂಚಿಕೊಂಡರು. ಅರ್ಜುನ್ ಜೊತೆ, ವಿಶ್ವದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಅಮೆರಿಕದ ಅಭಿಮನ್ಯು ಮಿಶ್ರಾ, ನೆದರ್ಲೆಂಡ್ಸ್‌ನ ಅನಿಶ್ ಗಿರಿ, ಭಾರತದ ನಿಹಾಲ್ ಸರಿನ್ ತಲಾ 4.5 ಅಂಕ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ವಿಶ್ವ ಚಾಂಪಿಯನ್ ಗುಕೇಶ್ (3) ಅವರ ಹಿನ್ನಡೆ ಮುಂದುವರಿಯಿತು. ಈ ಬಾರಿ ಅವರು ಗ್ರೀಸ್‌ನ ನಿಕೋಲಸ್ ಥಿಯೋಡರ್ (4) ಅವರಿಗೆ ಮಣಿದರು. ಪ್ರಜ್ಞಾನಂದ (3.5) ಅವರು ಅಜರ್‌ಬೈಜಾನ್ ರವೂಫ್ ಮೆಮೆಡೋವ್ ಜೊತೆ ಡ್ರಾ ಮಾಡಿಕೊಂಡರು. ಕಪ್ಪು ಕಾಯಿಗಳಲ್ಲಿ ಆಡಿದ ನಿಹಾಲ್ ಸರಿನ್, ಪೋಲೆಂಡ್‌ನ ಜಿಮೊನ್ ಗುಮುಲರ್ಝ್ ಅವರನ್ನು ಸೋಲಿಸಿದರು.
ಮಹಿಳಾ ವಿಭಾಗದಲ್ಲಿ ವೈಶಾಲಿ, ಅಜರ್‌ಬೈಜಾನ್‌ನ ಉಲ್ವಿಯಾ ಫತಾಲಿಯೇವಾ (4) ವಿರುದ್ಧ ಜಯಗಳಿಸಿದರೆ, ಲಾಗ್ನೊ, ಜರ್ಮನಿಯ ದಿನಾರಾ ವ್ಯಾಗ್ನರ್ (4) ವಿರುದ್ಧ ಗೆಲುವು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.