ADVERTISEMENT

ಫಿಡೆ ರೇಟೆಡ್ ಚೆಸ್ ಟೂರ್ನಿ: ಅಗ್ರಸ್ಥಾನದಲ್ಲಿ ಅಜೀಶ್‌, ಇಶಾನ್, ವಿಘ್ನೇಶ್ವರನ್

ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿ: ಐಎಂ ಬಾಲಸುಬ್ರಹ್ಮಣ್ಯಂ ಜೊತೆ ಡ್ರಾ ಸಾಧಿಸಿದ ರವೀಶ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 15:36 IST
Last Updated 28 ಡಿಸೆಂಬರ್ 2025, 15:36 IST
ಅಜೀಶ್ ಆ್ಯಂಟನಿ
ಅಜೀಶ್ ಆ್ಯಂಟನಿ   

ಮಂಗಳೂರು: ಕೇರಳದ ಅಜೀಶ್ ಆ್ಯಂಟನಿ, ಕರ್ನಾಟಕದ ಇಶಾನ್ ಭನ್ಸಾಲಿ ಮತ್ತು ತಮಿಳುನಾಡಿನ ವಿಘ್ನೇಶ್ವರನ್ ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಫಿಡೆ ರೇಟೆಡ್ ಮುಕ್ತ ಚೆಸ್ ಟೂರ್ನಿಯ ಆರನೇ ಸುತ್ತಿನ ಮುಕ್ತಾಯಕ್ಕೆ ಅಗ್ರಸ್ಥಾನಗಳನ್ನು ಹಂಚಿಕೊಂಡಿದ್ದಾರೆ. 

ಕರ್ನಾಟಕ ತುಳು ಅಕಾಡೆಮಿಯ ಅಮೃತ ಸೊಮೇಶ್ವರ ಸಭಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೂವರೂ ತಲಾ 5.5 ಪಾಯಿಂಟ್ ಗಳಿಸಿದ್ದು ಉತ್ತಮ ಟೈಬ್ರೇಕರ್ ಆಧಾರದಲ್ಲಿ ಅಜೀಶ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಶ್ರೇಯಾಂಕಿತ ಆಟಗಾರ, ಇಂಟರ್‌ನ್ಯಾಷನಲ್ ಮಾಸ್ಟರ್ ಬಾಲಸುಬ್ರಹ್ಮಣ್ಯಂ ರಾಮನಾಥನ್ ಸೇರಿದಂತೆ 10 ಮಂದಿ ತಲಾ 5 ಪಾಯಿಂಟ್ ಗಳಿಸಿದ್ದಾರೆ. 

ಶನಿವಾರ 4 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಅಜೀಶ್ ಮಂಗಳೂರಿನ ರವೀಶ್ ಕೋಟೆ ಭಾನುವಾರದ ಮೊದಲ ಸುತ್ತಿನಲ್ಲಿ ಮುಖಾಮುಖಿಯಾದರು. ಪಂದ್ಯ ಡ್ರಾ ಆಯಿತು. ಮುಂದಿನ ಸುತ್ತಿನಲ್ಲಿ ಅಜೀಶ್ ಮೂರನೇ ಶ್ರೇಯಾಂಕಿತ ತಮಿಳುನಾಡಿನ ಪ್ರಸನ್ನ ಕಾರ್ತಿಕ್ ವಿರುದ್ಧ ಜಯ ಸಾಧಿಸಿದರು. ರವೀಶ್ ಕೋಟೆ ಅವರು ಬಾಲಸುಬ್ರಹ್ಮಣ್ಯಂ ರಾಮನಾಥನ್ ಜೊತೆಯೂ ಡ್ರಾ ಸಾಧಿಸಿದರು. ರವೀಶ್, ಗೋವಾದ ಜೋಶುವಾ ಮಾರ್ಕ್ ಟೆಲಿಸ್‌, ಕೇರಳದ ವೈಷ್ಣವ್‌ ಎಸ್‌, ಜಾಯ್ ಲಾಜರ್‌, ಸಿದ್ಧಾರ್ಥ್ ಶ್ರೀಕುಮಾರ್, ಸನೂಸ್ ಶಿಬು, ಅನಿಲ್‌ ಕುಮಾರ್‌ ಒ.ಟಿ, ಕರ್ನಾಟಕದ ರಾಘವ ಬೂಡೂರು ಹಾಗೂ ಗವಿಸಿದ್ದಯ್ಯ 5 ಪಾಯಿಂಟ್ ಗಳಿಸಿದ್ದಾರೆ. 

ADVERTISEMENT

ಅಗ್ರ ಶ್ರೇಯಾಂಕಿತ, ಕೇರಳದ ಮಾರ್ತಾಂಡನ್ 4.5 ಪಾಯಿಂಟ್‌ಗಳೊಂದಿಗೆ 20 ಮಂದಿಯ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. 

6ನೇ ಸುತ್ತಿನ ಪ್ರಮುಖ ಫಲಿತಾಂಶಗಳು:

ಕೇರಳದ ಅಜೀಷ್ ಆ್ಯಂಟನಿಗೆ ತಮಿಳುನಾಡಿನ ಪ್ರಸನ್ನ ಕಾರ್ತಿಕ್ ವಿರುದ್ಧ ಜಯ; ತಮಿಳುನಾಡಿನ ವಿಘ್ನೇಶ್ವರನ್‌ಗೆ ಕೇರಳದ ಅಮನ್‌ಲಾಲ್ ಎದುರು, ಕರ್ನಾಟಕದ ಇಶಾನ್ ಭನ್ಸಾಲಿಗೆ ಕರ್ನಾಟಕದ ಇಂದ್ರಜಿತ್ ವಿರುದ್ಧ, ಕರ್ನಾಟಕದ ಇಶಾಬ್ ಭನ್ಸಾಲಿಗೆ ಕರ್ನಾಟಕದ ಇಂದ್ರಜೀತ್ ಮಜುಂದಾರ್ ವಿರುದ್ಧ ಜಯ; ಕರ್ನಾಟಕದ ರವೀಶ್ ಕೋಟ್ ಮತ್ತು ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್, ಗೋವಾದ ಜೋಶುವಾ ಮಾರ್ಕ್ ಟೆಲಿಸ್‌ ಮತ್ತು ಕೇರಳದ ವೈಷ್ಣವ್‌ ಎಸ್‌ ನಡುವಿನ ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.