ADVERTISEMENT

ಚೆಸ್‌ ವಿಶ್ವಕಪ್‌: ಟೈಬ್ರೇಕರ್‌ಗೆ ತಲುಪಿದ ಅರ್ಜುನ್ ಹೋರಾಟ

ಪಿಟಿಐ
Published 18 ನವೆಂಬರ್ 2025, 17:45 IST
Last Updated 18 ನವೆಂಬರ್ 2025, 17:45 IST
ಸೆಮಿಫೈನಲ್ ತಲುಪಿದ ಉಜ್ಬೇಕಿಸ್ತಾನದ ನದಿರ್ಬೆಕ್‌ ಯಾಕುಬುಯೇವ್
ಫಿಡೆ ಚಿತ್ರ
ಸೆಮಿಫೈನಲ್ ತಲುಪಿದ ಉಜ್ಬೇಕಿಸ್ತಾನದ ನದಿರ್ಬೆಕ್‌ ಯಾಕುಬುಯೇವ್ ಫಿಡೆ ಚಿತ್ರ    

ಪಣಜಿ: ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಅವರು ಚೆಸ್‌ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಂಗಳವಾರ ಚೀನಾದ ವೀ ಯಿ ವಿರುದ್ಧ ಎರಡನೇ ಕ್ಲಾಸಿಕಲ್‌ ಆಟವನ್ನೂ ಡ್ರಾ ಮಾಡಿಕೊಂಡರು. ಇವರಿಬ್ಬರು ಬುಧವಾರ ಟೈಬ್ರೇಕರ್‌ ಪಂದ್ಯ ಆಡಬೇಕಾಗಿದ್ದು ಗೆದ್ದ ಆಟಗಾರ ಸೆಮಿಫೈನಲ್ ತಲುಪಲಿದ್ದಾರೆ.

ಸೋಮವಾರ ಇವರಿಬ್ಬರ ನಡುವೆ ಮೊದಲ ಕ್ಲಾಸಿಕಲ್ ಆಟವೂ ಡ್ರಾ ಆಗಿತ್ತು. ದಿನದ ಇತರ ಎರಡು ಕ್ವಾರ್ಟರ್‌ಫೈನಲ್ ಪಂದ್ಯಗಳೂ 1–1ರಲ್ಲಿ ಸಮಬಲಗೊಂಡವು.

ಮೊದಲ ಆಟದಲ್ಲಿ ಜಯಗಳಿಸಿದ್ದ ಉಜ್ಬೇಕ್ ಆಟಗಾರ ನದಿರ್ಬೆಕ್ ಯಾಕುಬುಯೇವ್, ಜರ್ಮನಿಯ ಅಲೆಕ್ಸಾಂಡರ್‌ ಡೊನ್ಜೆಂಕೊ ಜೊತೆ ಎರಡನೇ ಆಟವನ್ನು ಡ್ರಾ ಮಾಡಿಕೊಳ್ಳುವ ಮೂಲಕ 1.5–0.5ರಲ್ಲಿ ಜಯಗಳಿಸಿ ಸೆಮಿಫೈನಲ್ ತಲುಪಿದ ಮೊದಲ ಆಟಗಾರ ಎನಿಸಿದರು. ಡೊನ್ಚೆಂಕೊ ಕೊನೆಯವರೆಗೂ ಗೆಲುವಿಗೆ ಯತ್ನಿಸಿದರೂ, ಯಾಕುಬುಯೇವ್‌ ಯಾವ ಹಂತದಲ್ಲೂ ಬಿಟ್ಟುಕೊಡಲಿಲ್ಲ. 

ADVERTISEMENT

ಮೊದಲ ಆಟವನ್ನು ಅಷ್ಟೇನೂ ಪ್ರಯಾಸವಿಲ್ಲದೇ ಡ್ರಾ ಮಾಡಿಕೊಂಡಿದ್ದ ಅರ್ಜುನ್‌ ಅವರಿಗೆ ಎರಡನೇ ಆಟದಲ್ಲಿ ಚೀನಾದ ವೀ  ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಕಪ್ಪು ಕಾಯಿಗಳಲ್ಲಿ ಆಡಿದ ಚೀನಾದ ಆಟಗಾರ ಉತ್ತಮ ನಡೆಗಳಿಂದ ಗಮನಸೆಳೆದರಲ್ಲದೇ, ನಿರಾಯಾಸವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾದರು. ಈ ಆಟ 32 ನಡೆಗಳನ್ನು ಕಂಡಿತು.

ಉಜ್ಬೇಕಿಸ್ತಾನದ ಜಾವೊಖಿರ್ ಸಿಂಧರೋವ್‌ ಅವರು ಮೆಕ್ಸಿಕೊದ ಹೊಸ ಎಡುವಾರ್ಡೊ ಮಾರ್ಟಿನೆಝ್ ಅಲ್ಕಂತಾರ ಜೊತೆ ಎರಡನೇ ಆಟವನ್ನೂ ಡ್ರಾ ಮಾಡಿಕೊಂಡರು. ಹೀಗಾಗಿ ಈ ಪಂದ್ಯದಲ್ಲೂ ಟೈಬ್ರೇಕರ್‌ಗಳ ಮೂಲಕ ವಿಜೇತ ಆಟಗಾರನ ನಿರ್ಧಾರವಾಗಲಿದೆ.

ಅಮೆರಿಕದ ಸ್ಯಾಮ್‌ ಶಂಕ್ಲಾಂಡ್‌ ಮತ್ತು ರಷ್ಯಾದ ಆ್ಯಂಡ್ರೆ ಇಸಿಪೆಂಕೊ ಸಹ ಎರಡನೇ ಕ್ಲಾಸಿಕಲ್ ಆಟ ಡ್ರಾ ಮಾಡಿಕೊಂಡು ಟೈಬ್ರೇಕರ್ ಸುತ್ತಿಗೆ ಸಜ್ಜಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.