ADVERTISEMENT

ಇಂದಿನಿಂದ ಅಥ್ಲೀಟ್‌ಗಳ ತಾಲೀಮು

ಪಿಟಿಐ
Published 24 ಮೇ 2020, 20:00 IST
Last Updated 24 ಮೇ 2020, 20:00 IST
ಆದಿಲ್‌ ಸುಮರಿವಾಲ
ಆದಿಲ್‌ ಸುಮರಿವಾಲ   

ನವದೆಹಲಿ: ಲಾಕ್‌ಡೌನ್‌ ಕಾರಣ ಸುಮಾರು ಎರಡು ತಿಂಗಳ ಕಾಲ ಕೊಠಡಿಗಳಲ್ಲಿ ಬಂಧಿಗಳಾಗಿದ್ದ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ಗಳು ಸೋಮವಾರದಿಂದ ಫಿಟ್‌ನೆಸ್‌ ತಾಲೀಮು ನಡೆಸಲಿದ್ದಾರೆ.

‘ಪಟಿಯಾಲದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌), ಬೆಂಗಳೂರು ಹಾಗೂ ಊಟಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರಗಳಲ್ಲಿರುವ ಅಥ್ಲೀಟ್‌ಗಳು ಸೋಮವಾರದಿಂದ ಹೊರಾಂಗಣದಲ್ಲಿ ತಾಲೀಮು ನಡೆಸಲಿದ್ದಾರೆ. ಈ ವೇಳೆ ಫಿಟ್‌ನೆಸ್‌ಗೆ ಆದ್ಯತೆ ನೀಡಲಿದ್ದಾರೆ’ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಅಧ್ಯಕ್ಷ ಆದಿಲ್‌ ಸುಮರಿವಾಲ ತಿಳಿಸಿದ್ದಾರೆ.

‘ಅಥ್ಲೀಟ್‌ಗಳೆಲ್ಲಾ ಎಂಟು ವಾರಗಳಿಂದ ಕೊಠಡಿಗಳಲ್ಲೇ ಇದ್ದರು. ಈ ಅವಧಿಯಲ್ಲಿ ಅವರಿಗೆ ನಿರ್ದಿಷ್ಠ ತರಬೇತಿ ಸಿಕ್ಕಿಲ್ಲ. ಹೀಗಾಗಿ ಫಿಟ್‌ನೆಸ್‌ ಮಟ್ಟ ಕುಸಿದಿದೆ. ಸೋಮವಾರದಿಂದ ಎಲ್ಲರೂ ಟ್ರ್ಯಾಕ್‌ನಲ್ಲಿ ಅಂತರ ಕಾಪಾಡಿಕೊಂಡು ಕಸರತ್ತು ನಡೆಸಲಿದ್ದಾರೆ. ದೈಹಿಕ ಸಾಮರ್ಥ್ಯ ಮರಳಿ ಪಡೆದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಮಾರ್ಚ್‌ 18ರಿಂದಲೂ ಪಟಿಯಾಲದ ಎನ್‌ಐಎಸ್‌ ಕೇಂದ್ರದಲ್ಲಿ ಬಂಧಿಯಾಗಿದ್ದೇನೆ. ನಾಲ್ಕು ಗೋಡೆಗಳ ನಡುವೆಯೇ ಇದ್ದು ಬೇಸರವಾಗಿತ್ತು. ಈಗ ಹೊರಾಂಗಣ ಅಭ್ಯಾಸಕ್ಕೆ ಅನುಮತಿ ಸಿಕ್ಕಿರುವುದರಿಂದ ಖುಷಿಯಾಗಿದೆ’ ಎಂದು ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ತಿಳಿಸಿದ್ದಾರೆ.

ನೀರಜ್‌ ಅವರು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಸೆಪ್ಟೆಂಬರ್‌ 12ರಿಂದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಆರಂಭಿಸಲು ನಿರ್ಧರಿಸಿರುವ ಎಎಫ್‌ಐ,ಅಥ್ಲೀಟ್‌ಗಳ ಹೊರಾಂಗಣ ಅಭ್ಯಾಸಕ್ಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅವುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.