ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್
–ಎಕ್ಸ್ ಚಿತ್ರ
ಭುವನೇಶ್ವರ: ಪೆನಾಲ್ಟಿ ಕಾರ್ನರ್‌ನಲ್ಲಿ ಪದೇ ಪದೇ ಎಡವುತ್ತಿರುವ ಭಾರತ ಪುರುಷರ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಐರ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡವು ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸ್ಪೇನ್ ಮತ್ತು ಜರ್ಮನಿ ವಿರುದ್ಧ ಮೊದಲ ಲೆಗ್‌ನ ಪಂದ್ಯಗಳಲ್ಲಿ ಸೋತು, ರಿವರ್ಸ್ ಲೆಗ್‌ನಲ್ಲಿ ಗೆಲುವು ಸಾಧಿಸಿದೆ.
ನಾಲ್ಕು ಪಂದ್ಯಗಳಲ್ಲಿ ಒಟ್ಟು 14 ಪೆನಾಲ್ಟಿ ಕಾರ್ನರ್ ಅವಕಾಶಗಳು ಭಾರತ ತಂಡಕ್ಕೆ ಒದಗಿತ್ತು. ಆದರೆ, ಒಂದೂ ಬಾರಿಯೂ ಚೆಂಡನ್ನು ಗುರಿ ಸೇರಿಸಲು ಸಾಧ್ಯವಾಗದಿರುವುದು ತಂಡವನ್ನು ಚಿಂತೆಗೀಡುಮಾಡಿದೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಹರ್ಮನ್‌ಪ್ರೀತ್ ಸಿಂಗ್ ಬಳವು ಇದೀಗ ತಮಗಿಂತ ಐದು ಸ್ಥಾನ ಕೆಳಗಿರುವ ಐರ್ಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.
ವನಿತೆಯರಿಗೆ ಜರ್ಮನಿ ಸವಾಲು:
ಭಾರತ ಮಹಿಳೆಯರು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಜರ್ಮನಿ ತಂಡದ ವಿರುದ್ಧ ಸೆಣಸಲಿದ್ದಾರೆ.
ಸಲಿಮಾ ಟೆಟೆ ಬಳಗವು ಇಂಗ್ಲೆಂಡ್ ವಿರುದ್ಧ ಶುಭಾರಂಭ ಮಾಡಿ ನಂತರ ಹ್ಯಾಟ್ರಿಕ್ ಸೋಲು ಅನುಭವಿಸಿತ್ತು. ಇದೀಗ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸುತ್ತಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ (4) ಎಂಟನೇ ಸ್ಥಾನದಲ್ಲಿದ್ದರೆ, ಜರ್ಮನಿ (3) ಒಂಬತ್ತನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.