ADVERTISEMENT

ಮಹಿಳಾ ಹಾಕಿ ಸೀರಿಸ್ ಫೈನಲ್ಸ್‌: ಭರ್ಜರಿ ಗೆಲುವು ಸಾಧಿಸಿ ಭಾರತ ಶುಭಾರಂಭ

ಉರುಗ್ವೆ ವಿರುದ್ಧ 4–1ರಿಂದ ಜಯ

ಪಿಟಿಐ
Published 15 ಜೂನ್ 2019, 13:46 IST
Last Updated 15 ಜೂನ್ 2019, 13:46 IST
ರಾಣಿ ರಾಂಪಾಲ್ –ಪಿಟಿಐ ಚಿತ್ರ
ರಾಣಿ ರಾಂಪಾಲ್ –ಪಿಟಿಐ ಚಿತ್ರ   

ಹಿರೋಶಿಮಾ: ಸಂಘಟಿತ ಆಟದ ಮೂಲಕ ಎದುರಾಳಿಗಳ ಆಕ್ರಮಣವನ್ನು ಮೆಟ್ಟಿ ನಿಂತ ಭಾರತ ಮಹಿಳಾ ತಂಡದವರು ಎಫ್‌ಐಎಚ್ ಸೀರಿಸ್ ಫೈನಲ್ಸ್‌ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರಾಣಿ ರಾಂಪಾಲ್ ಬಳಗ 4–1ರಿಂದ ಉರುಗ್ವೆ ತಂಡವನ್ನು ಮಣಿಸಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. 10ನೇ ನಿಮಿಷದಲ್ಲಿ ನಾಯಕಿ ಗಳಿಸಿದ ಗೋಲಿನ ಮೂಲಕ ಮುನ್ನಡೆಯನ್ನೂ ಸಾಧಿಸಿತು. ಸಮಬಲದ ಪೈಪೋಟಿ ನೀಡಿದರೂ ಮೊದಲ ಕ್ವಾರ್ಟರ್‌ನಲ್ಲಿ ಗೋಲು ಗಳಿಸಲು ಉರುಗ್ವೆಗೆ ಸಾಧ್ಯವಾಗಲಿಲ್ಲ. ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ತಂಡ ಕೈಚೆಲ್ಲಿತು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಉತ್ತರ ನೀಡಲು ಉರುಗ್ವೆ ವಿಫಲವಾಯಿತು. ಹೀಗಾಗಿ ಭಾರತ ಪದೇ ಪದೇ ಎದುರಾಳಿಗಳ ಪಾಳಯದಲ್ಲಿ ಆತಂಕ ಸೃಷ್ಟಿಸಿತು.

ADVERTISEMENT

21ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಗುರ್ಜಂತ್ ಕೌರ್ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

2–0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತದ ಆಟಗಾರ್ತಿಯರು ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಉರುಗ್ವೆ ಆಕ್ರಮಣಕ್ಕೆ ಒತ್ತು ನೀಡಲಿಲ್ಲ. ಹೀಗಾಗಿ ಕೆಲವು ನಿಮಿಷ ಆಟ ಸಪ್ಪೆಯಾಯಿತು. ನಂತರ ಉಭಯ ತಂಡಗಳು ತುರುಸಿನ ಆಟಕ್ಕೆ ಮುಂದಾದರು. ಭಾರತಕ್ಕೆ ಲಭಿಸಿದ ಒಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಉರುಗ್ವೆ ಗೋಲ್‌ಕೀಪರ್ ವಿಫಲಗೊಳಿಸಿದರೆ ಉರುಗ್ವೆಯ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಭಾರತದ ಗೋಲ್‌ಕೀಪರ್ ವಿಫಲಗೊಳಿಸಿದರು.

ವಂದನಾ–ಜ್ಯೋತಿ ಮ್ಯಾಜಿಕ್:40ನೇ ನಿಮಿಷದಲ್ಲಿ ವಂದನಾ ಕಟಾರಿಯ ಮತ್ತು ಜ್ಯೋತಿ ಜೋಡಿ ಮ್ಯಾಜಿಕ್ ಮಾಡಿತು. ವಂದನಾ ನೀಡಿದ ಸೊಗಸಾದ್ ಪಾಸ್ ಅನ್ನು ಗುರಿ ಮುಟ್ಟಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸುವಲ್ಲಿ ಜ್ಯೋತಿ ಯಶಸ್ವಿಯಾದರು.

ಅಂತಿಮ ಕ್ವಾರ್ಟರ್‌ನಲ್ಲೂ ಭಾರತದ ಪಾರಮ್ಯ ಮುಂದುವರಿಯಿತು. 51ನೇ ನಿಮಿಷದಲ್ಲಿ ಉರುಗ್ವೆ ಪರ ಮರಿಯಾ ತೆರೆಸಾ ವಿಯಾನ ಗೋಲು ಗಳಿಸಿದರು. 55ನೇ ನಿಮಿಷದಲ್ಲಿ ರಾಣಿ ರಾಂಪಾಲ್ ನೀಡಿದ ಪಾಸ್‌ನಲ್ಲಿ ಲಾಲ್‌ರೆಮ್ಸಿಯಾಮಿ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.