
ಇಪೊ, ಮಲೇಷ್ಯಾ (ಪಿಟಿಐ): ಐದು ಸಲದ ಚಾಂಪಿಯನ್ ಭಾರತ ಹಾಕಿ ತಂಡವು ಭಾನುವಾರ ಆರಂಭವಾಗಲಿರುವ 31ನೇ ಆವೃತ್ತಿಯ ಸುಲ್ತಾನ್ ಅಜ್ಲನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ.
ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಪ್ರಶಸ್ತಿ ಗೆದ್ದ ತಂಡಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ನವೆಂಬರ್ 23 ರಿಂದ 30ರವರೆಗೆ ಟೂರ್ನಿ ನಡೆಯಲಿದೆ.
2019ರಲ್ಲಿ ಭಾರತ ತಂಡವು ರನ್ನರ್ಸ್ ಅಪ್ ಆಗಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ತಂಡವು ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ. ಈ ಬಾರಿ ಬೆಲ್ಜಿಯಂ, ಕೆನಡಾ, ಕೊರಿಯಾ, ನ್ಯೂಜಿಲೆಂಡ್ ಮತ್ತು ಆತಿಥೇಯ ಮಲೇಷ್ಯಾ ತಂಡಗಳು ಸ್ಪರ್ಧೆಯಲ್ಲಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.
ಸಂಜಯ್ ನಾಯಕತ್ವದಲ್ಲಿ ಆಡುತ್ತಿರುವ ಭಾರತ ತಂಡವು ಮೊದಲ ಪಂದ್ಯದಲ್ಲಿ ಕೊರಿಯಾ (ನ.23), ಬೆಲ್ಜಿಯಂ (ನ.24), ಮಲೇಷ್ಯಾ (ನ.26), ನ್ಯೂಜಿಲೆಂಡ್ (ನ.27) ಹಾಗೂ ಕೆನಡಾ (ನ.29) ತಂಡಗಳನ್ನು ಎದುರಿಸಲಿದೆ.
ಮುಂದಿನ ವರ್ಷ ನಡೆಯಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಆಡಲಿರುವ ಭಾರತ ತಂಡಕ್ಕೆ ಅಜ್ಲನ್ ಶಾ ಕಪ್ ಟೂರ್ನಿಯು ಪೂರ್ವಸಿದ್ಧತೆ ವೇದಿಕೆಯೂ ಆಗಿದೆ. ತಂಡದಲ್ಲಿ ಗೋಲ್‌ಕೀಪರ್‌ಗಳಾದ ಪವನ್ ಮತ್ತು ಎಚ್.ಎಸ್. ಮೋಹಿತ್ ಅವರಿದ್ದಾರೆ. ಪೂವಣ್ಣ ಚಂದೂರಾ ಬಾಬಿ, ನೀಲಂ ಸಂಜೀಪ್ ಸೆಸ್, ಯಶದೀಪ್ ಸಿವಾಚ್, ಜುಗರಾಜ್ ಸಿಂಗ್, ಅಮಿತ್ ರೋಹಿದಾಸ್ ಮತ್ತು ನಾಯಕ ಸಂಜಯ್ ಅವರು ರಕ್ಷಣಾ ವಿಭಾಗದಲ್ಲಿದ್ದಾರೆ. ರಾಜಿಂದರ್ ಸಿಂಗ್, ರಾಜಕುಮಾರ್ ಪಾಲ್, ನೀಲಕಂಠ ಶರ್ಮಾ, ರವಿಚಂದ್ರ ಸಿಂಗ್ ಮೋಯಿರಾಂಗ್ತೇಮ್, ವಿವೇಕ್ ಸಾಗರ್ ಪ್ರಸಾದ್ ಹಾಗೂ ಮೊಹಮ್ಮದ್ ರಾಹಿಲ್ ಮೌಸಿನ್ ಅವರು ಮಿಡ್‌ಫೀಲ್ಡ್‌ನಲ್ಲಿ ಆಡಲಿದ್ದಾರೆ. ಸುಖಜೀತ್ ಸಿಂಗ್, ಶಿಲಾನಂದ ಲಾಕ್ರಾ, ಸೆಲ್ವಮ್ ಕಾರ್ತಿ, ಆದಿತ್ಯ ಅರ್ಜುನ್ ಲಾಳಗೆ, ದಿಲ್‌ಪ್ರೀತ್ ಸಿಂಗ್ ಮತ್ತು ಅಭಿಷೇಕ್ ಅವರು ಫಾರ್ವರ್ಡ್‌ನಲ್ಲಿದ್ದಾರೆ.
ಪೂರ್ಣಾವಧಿ ನಾಯಕ ಹರ್ಮನ್‌ಪ್ರೀತ್ ಸಿಂಗ್, ಮನಪ್ರೀತ್ ಸಿಂಗ್ ಮತ್ತು ಇನ್ನೂ ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲಿ ಕೋಚ್ ಕ್ರೇಗ್ ಫುಲ್ಟನ್ ಅವರ ಮಾರ್ಗದರ್ಶನದಲ್ಲಿ ತಂಡವು ಅಭ್ಯಾಸ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.