ADVERTISEMENT

ಹಾಕಿ: ವಿರಾಮಕ್ಕೆ ಕನ್ನಡಿಗ ಸುನಿಲ್ ನಿರ್ಧಾರ

ಫೈವ್ ಎ ಸೈಡ್ ಹಾಕಿಯಲ್ಲಿ ಮುಂದುವರಿಯಲು ನಿರ್ಧಾರ; ತಂಡದ ಆಧಾರಸ್ತಂಭ ಸ್ಟ್ರೈಕರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:19 IST
Last Updated 2 ಅಕ್ಟೋಬರ್ 2021, 2:19 IST
ಎಸ್‌.ವಿ. ಸುನಿಲ್‌ -ಪ್ರಜಾವಾಣಿ ಚಿತ್ರ
ಎಸ್‌.ವಿ. ಸುನಿಲ್‌ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಂಡನ್ ಮತ್ತು ರಿಯೊ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ಕನ್ನಡಿಗ ಎಸ್‌.ವಿ.ಸುನಿಲ್ ಅವರು ಅಂತರರಾಷ್ಟ್ರೀಯ ಹಾಕಿಯಿಂದ ವಿರಾಮ ಪಡೆಯುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

ಭಾರತ ತಂಡ ಕಂಡ ಅತ್ಯಪೂರ್ವ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿರುವ ಕೊಡಗಿನ ಸೋಮವಾರಪೇಟೆಯ ಸುನಿಲ್ ಹಾಕಿಗೆ ವಿದಾಯ ಹೇಳಿದ್ದಾರೆ ಎಂಬ ವದಂತಿ ಸಂಜೆ ವೇಳೆ ಹಬ್ಬಿತ್ತು. ಐತಿಹಾಸಿಕ ಕಂಚಿನ ಪದಕ ಗಳಿಸಿದ ತಂಡದಲ್ಲಿ ಆಡಿದ್ದ ಡ್ರ್ಯಾಗ್ ಫ್ಲಿಕ್ ಪರಿಣಿತ ರೂಪಿಂದರ್ ಪಾಲ್ ಸಿಂಗ್ ಮತ್ತು ಡಿಫೆಂಡರ್ ಬೀರೇಂದ್ರ ಲಾಕ್ರ ಗುರುವಾರ ದಿಢೀರ್ ಆಗಿ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಸುನಿಲ್ ನಿವೃತ್ತರಾಗಿದ್ದಾರೆ ಎಂಬ ವದಂತಿ ಚರ್ಚೆಗೆ ಗ್ರಾಸವಾಗಿತ್ತು.

ಆದರೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಳ್ಳಲಿಲ್ಲ. ಸದ್ಯ ಕೆಲ ಕಾಲ ವಿರಾಮ ಬಯಸಿದ್ದೇನೆ. ಆದ್ದರಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದೇನೆ. ಫೈವ್ ಎ ಸೈಡ್ ಹಾಕಿಯ ಕಡೆಗೆ ಗಮನ ಕೊಡುವುದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

32 ವರ್ಷದ ಸುನಿಲ್ 264 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 72 ಗೋಲುಗಳನ್ನು ಗಳಿಸಿದ್ದಾರೆ. 2007ರ ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆ ವರ್ಷ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಪ್ರಶಸ್ತಿ ಗೆದ್ದುಕೊಂಡಿತ್ತು. 2011ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಚಿನ್ನ ಗೆದ್ದಾಗಲೂ ಮುಂದಿನ ಬಾರಿ ಬೆಳ್ಳಿ ಗೆದ್ದಾಗಲೂ ಅವರು ತಂಡದಲ್ಲಿದ್ದರು. 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಮತ್ತು 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ತಂಡದಲ್ಲೂ ಇದ್ದರು. 2017ರಲ್ಲಿ ಅವರಿದ್ದ ತಂಡ ಏಷ್ಯಾಕಪ್‌ನಲ್ಲಿ ಚಿನ್ನದ ಪದಕ ಗಳಿಸಿತ್ತು.

2016 ಮತ್ತು 2018ರ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗಳಿಸಿತ್ತು. ಆಗಲೂ ಸುನಿಲ್ ತಂಡದಲ್ಲಿದ್ದರು. 2015 ಮತ್ತು 2017ರ ವಿಶ್ವ ಲೀಗ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಾಗ ಸುನಿಲ್ ಅವರು ಫಾರ್ವರ್ಡ್ ವಿಭಾಗದ ಆಧಾರಸ್ತಂಭವಾಗಿದ್ದರು. 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆಯೂ ಅವರ ಮುಡಿಗೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.