ADVERTISEMENT

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮೊಮೊಟ ವಿದಾಯ

ಏಜೆನ್ಸೀಸ್
Published 18 ಏಪ್ರಿಲ್ 2024, 13:07 IST
Last Updated 18 ಏಪ್ರಿಲ್ 2024, 13:07 IST
ಬ್ಯಾಡ್ಮಿಂಟನ್‌
ಬ್ಯಾಡ್ಮಿಂಟನ್‌   

ಟೋಕಿಯೊ: ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಿಂದ ನಿವೃತ್ತರಾಗುವುದಾಗಿ ಎರಡು ಬಾರಿಯ ವಿಶ್ವ ಚಾಂಪಿಯನ್‌, ಜಪಾನ್‌ನ ಕೆಂಟೊ ಮೊಮೊಟಾ ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳಾದ ನಂತರ ತಮಗೆ ಮೊದಲಿನಂತೆ ಆಡಲು ಸಾಧ್ಯವಾಗಲಿಲ್ಲ ಎಂದು 29 ವರ್ಷದ ಮೊಮೊಟಾ ಒಪ್ಪಿಕೊಂಡಿದ್ದಾರೆ.

ಬ್ಯಾಡ್ಮಿಂಟನ್‌ ಸೂಪರ್‌ಸ್ಟಾರ್‌ ಎನಿಸಿದ್ದ ಅವರು 2019ರಲ್ಲಿ 11 ಪ್ರಶಸ್ತಿಗಳನ್ನು ಗೆದ್ದುಕೊಂಡು ಬೀಗಿದ್ದರು. ಆ ವರ್ಷ ಆಡಿದ 73 ಪಂದ್ಯಗಳಲ್ಲಿ ಆರರಲ್ಲಿ ಮಾತ್ರ ಸೋತಿದ್ದರು.

ADVERTISEMENT

2020ರ ಜನವರಿಯಲ್ಲಿ ಮಲೇಷ್ಯಾ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡ ಕೆಲವೇ ಗಂಟೆಗಳ ಬಳಿಕ ಕ್ವಾಲಾಲಂಪುರ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಅವರಿದ್ದ ಕಾರು ಅಪಘಾತಕ್ಕೆ ಈಡಾಗಿ ಚಾಲಕ ಮೃತಪಟ್ಟಿದ್ದ. ಮೊಮೊಟಾ ಅವರ ಕಣ್ಣಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವರ್ಷದ ನಂತರ ಅವರು ಆಟಕ್ಕೆ ಮರಳಿದರೂ ಅವರಿಗೆ  ‘ಡಬಲ್‌ ವಿಷನ್‌’ ಸಮಸ್ಯೆ  ಕಾಡಿತ್ತು. ನಂತರವೂ ಅವರು ಎರಡು ಪ್ರಶಸ್ತಿಗಳನ್ನು ಗೆದ್ದರೂ, ಹಿಂದಿನ ಲಯಕ್ಕೆ ಮರಳಲು ಆಗಿರಲಿಲ್ಲ.

ಪ್ರಸ್ತುತ ವಿಶ್ವಕ್ರಮಾಂಕದಲ್ಲಿ 52ನೇ ಸ್ಥಾನದಲ್ಲಿರುವ ಮೊಮೊಟಾ, ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಚೀನಾದಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಥಾಮಸ್‌ ಕಪ್‌ ಟೂರ್ನಿಯ ನಂತರ ನಿವೃತ್ತರಾಗಲಿದ್ದಾರೆ. ಆದರೆ ಅವರು ದೇಶಿಯ ಟೂರ್ನಿಗಳಲ್ಲಿ ಆಡಲಿದ್ದಾರೆ.

‘ಆ ರಸ್ತೆ ಅಪಘಾತದ ನಂತರ ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ನಾನು ಅಂದುಕೊಂಡಂತೆ ದೇಹ ಕೇಳುತ್ತಿರಲಿಲ್ಲ. ಆಟದ ಉತ್ತುಂಗದಲ್ಲಿದ್ದ ದಿನಗಳಿಗೆ ಮರಳಿ ಬರಲು ನನಗೆ ಆಗುವುದಿಲ್ಲ ಎಂದು ಖಚಿತವಾಯಿತು’ ಎಂದರು. ನಿವೃತ್ತಿಯ ಬಗ್ಗೆ ತಮಗೇನೂ ವಿಷಾದವಿಲ್ಲ ಎಂದೂ ಹೇಳಿದರು.

ಅಕ್ರಮ ಕ್ಯಾಸಿನೊದಲ್ಲಿ ಅಡಿದ್ದಕ್ಕೆ ಅವರನ್ನು 2016ರ ರಿಯೊ ಒಲಿಂಪಿಕ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಯಿತು. 2021ರ ಟೋಕಿಯೊ ಒಲಿಂಪಿಕ್ಸ್‌ ಮೊದಲ ಸುತ್ತಿನಲ್ಲೇ ಸೋತಿದ್ದು ಅವರಿಗೆ ದುಃಸ್ವಪ್ನದಂತೆ ಕಾಡಿತು. ‘ಅದೊಂದು ಹತಾಶ ನೆನಪು’ ಎಂದು ಪ್ರತಿಕ್ರಿಯಿಸಿದ್ದರು.

2024 ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಬಯಕೆ ಹೊಂದಿದ್ದರು. ಆದರೆ ಅವರ ಕ್ರಮಾಂಕ ಅರ್ಹತಾಮಟ್ಟಕ್ಕಿಂತ ಕೆಳಗಿದ್ದ ಕಾರಣ ಅವಕಾಶ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.