ADVERTISEMENT

ಡಬ್ಲ್ಯುಎಫ್‌ಐ: ಅಧ್ಯಕ್ಷ ಸ್ಥಾನಕ್ಕೆ ನಾಲ್ವರ ನಾಮಪತ್ರ

ಡಬ್ಲ್ಯುಎಫ್‌ಐ: ಬ್ರಿಜ್‌ಭೂಷಣ್‌ ಬಣದ ಬಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 23:49 IST
Last Updated 31 ಜುಲೈ 2023, 23:49 IST
ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತಮ್ಮ ಬಣದ ಅಭ್ಯರ್ಥಿಗಳ ಜತೆ ಬ್ರಿಜ್‌ಭೂಷಣ್‌ ಸಿಂಗ್‌ ಅವರು ಸೋಮವಾರ ಕಾಣಿಸಿಕೊಂಡರು ತ್ರ
ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತಮ್ಮ ಬಣದ ಅಭ್ಯರ್ಥಿಗಳ ಜತೆ ಬ್ರಿಜ್‌ಭೂಷಣ್‌ ಸಿಂಗ್‌ ಅವರು ಸೋಮವಾರ ಕಾಣಿಸಿಕೊಂಡರು ತ್ರ   –ಪಿಟಿಐ ಚಿತ್ರ

ನವದೆಹಲಿ: ಸಾಕಷ್ಟು ಕುತೂಹಲ ಕೆರಳಿಸಿರುವ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತರಾಗಿರುವ ಸಂಜಯ್‌ ಕುಮಾರ್ ಸಿಂಗ್‌ (ಉತ್ತರ ಪ್ರದೇಶ) ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಬ್ರಿಜ್‌ಭೂಷಣ್‌ ಬಣದಿಂದ ಚಂಡೀಗಢ ಕುಸ್ತಿ ಸಂಸ್ಥೆಯ ದರ್ಶನ್‌ ಲಾಲ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತು ಉತ್ತರಾಖಂಡದ ಎಸ್‌.ಪಿ.ದೇಸ್ವಾಲ್‌ ಅವರು ಖಜಾಂಚಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಡಬ್ಲ್ಯುಎಫ್‌ಐ ಮಾನ್ಯತೆ ಪಡೆದಿರುವ 25 ರಾಜ್ಯ ಕುಸ್ತಿ ಸಂಸ್ಥೆಗಳಲ್ಲಿ 22 ರಾಜ್ಯ ಸಂಸ್ಥೆಗಳ ಬೆಂಬಲ ನಮಗೆ ಇದೆ ಎಂದು ಬ್ರಿಜ್‌ಭೂಷಣ್‌ ಬಣ ಹೇಳಿಕೊಂಡಿದೆ. ಆ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನು ಗೆಲ್ಲುವ ‘ವಿಶ್ವಾಸ’ವನ್ನೂ ವ್ಯಕ್ತಪಡಿಸಿದೆ.

ADVERTISEMENT

ಬಲ ಪ್ರದರ್ಶನ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಇಲ್ಲಿನ ಒಲಿಂಪಿಕ್‌ ಭವನದಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬಂದವು. ಬ್ರಿಜ್‌ಭೂಷಣ್‌ ಬೆಂಬಲಿಗರು ಮತ್ತು ಅವರ ನಿಷ್ಠ ಗುಂಪಿನ ಅಭ್ಯರ್ಥಿಗಳ ‘ಬಲ ಪ್ರದರ್ಶನ’ಕ್ಕೆ  ಒಲಿಂಪಿಕ್‌ ಭವನ ವೇದಿಕೆಯಾಯಿತು. ಬ್ರಿಜ್‌ಭೂಷಣ್‌ ಅವರು ಒಲಿಂಪಿಕ್‌ ಭವನಕ್ಕೆ ಬರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಳಿಯ ವಿಶಾಲ್‌ ಸಿಂಗ್‌, ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳಿಗೆ ಸಾಥ್‌ ನೀಡಿದರು.

‘ನಮ್ಮ ಬಣದಿಂದ ವಿವಿಧ ಹುದ್ದೆಗಳಿಗೆ ಒಟ್ಟು 18 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಂಜಯ್‌ ಕುಮಾರ್‌ ಅವರು ನಮ್ಮ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಮೂರು ಉಪಾಧ್ಯಕ್ಷ ಸ್ಥಾನಗಳಿಗೂ ನಮ್ಮ ಬಣದಿಂದ ನಾಮಪತ್ರ ಸಲ್ಲಿಸಿದ್ದೇವೆ’ ಎಂದು ವಿಶಾಲ್‌ ಸಿಂಗ್‌ ತಿಳಿಸಿದರು.

‘ಅಧ್ಯಕ್ಷ ಸ್ಥಾನಕ್ಕೆ ನಾಲ್ವರು, ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಮೂವರು, ಉಪಾಧ್ಯಕ್ಷ ಸ್ಥಾನಕ್ಕೆ ಆರು ಮಂದಿ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮೂವರು, ಖಜಾಂಚಿ ಸ್ಥಾನಕ್ಕೆ ಇಬ್ಬರು, ಜಂಟಿ ಕಾರ್ಯದರ್ಶಿ ಹುದ್ದೆಗೆ ಮೂವರು, ಕಾರ್ಯಕಾರಿ ಸಮಿತಿಗೆ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 15 ಹುದ್ದೆಗಳಿಗೆ ಒಟ್ಟು 30 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ’ ಎಂದು ಚುನಾವಣಾಧಿಕಾರಿ ಆಗಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಹೇಶ್‌ ಮಿತ್ತಲ್‌ ಕುಮಾರ್‌ ಹೇಳಿದರು.

‘ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಡಬ್ಲ್ಯುಎಫ್‌ಐ ವೆಬ್‌ಸೈಟ್‌ನಲ್ಲಿ ಮಂಗಳವಾರ ಪ್ರಕಟಿಸಲಾಗುವುದು’ ಎಂದು ಅವರು ತಿಳಿಸಿದರು.

ನಾಮಪತ್ರ ವಾಪಸ್‌ ಪಡೆಯಲು ಆ.7 ಕೊನೆಯ ದಿನವಾಗಿದೆ.

ನನ್ನ ಕುಟುಂಬದ ಯಾರೂ ಸ್ಪರ್ಧಿಸುವುದಿಲ್ಲ: ‘ಈ ಚುನಾವಣೆಯಲ್ಲಿ ನನ್ನ ಕುಟುಂಬದ ಯಾರೂ ಸ್ಪರ್ಧಿಸುವುದಿಲ್ಲ. ಮೊದಲು ಚುನಾವಣೆ ನಡೆಯಲಿ. ಗೆದ್ದವರು ಆ ಬಳಿಕ ತಮ್ಮ ಕರ್ತವ್ಯ ನಿರ್ವಹಿಸುವರು’ ಎಂದು ಬ್ರಿಜ್‌ಭೂಷಣ್‌ ಅವರು ಸೋಮವಾರ ಬೆಳಿಗ್ಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.