ADVERTISEMENT

ಸಾಯ್‌ನಲ್ಲಿ ಉಚಿತ ಸೌಕರ್ಯ

ಹೆಚ್ಚೆಚ್ಚು ಕ್ರೀಡಾಕೂಟಗಳ ಆಯೋಜನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಕ್ರಮ

ಪಿಟಿಐ
Published 7 ಮೇ 2020, 18:39 IST
Last Updated 7 ಮೇ 2020, 18:39 IST

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್‌ಎಫ್‌) ಇನ್ನು ಮುಂದೆ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಕ್ರೀಡಾಂಗಣಗಳಲ್ಲಿ ಉಚಿತವಾಗಿ ಕ್ರೀಡಾಕೂಟಗಳನ್ನು ನಡೆಸಬಹುದಾಗಿದೆ.

ಹೆಚ್ಚೆಚ್ಚು ಕ್ರೀಡಾಕೂಟಗಳ ಆಯೋಜನೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಾಯ್‌ ಈ ನಿರ್ಧಾರ ಕೈಗೊಂಡಿದೆ.

ಐಒಎ ಹಾಗೂ ಎನ್‌ಎಸ್‌ಎಫ್‌ಗಳಿಗೆ ಈಗಾಗಲೇ ಮೈದಾನ ಶುಲ್ಕಗಳಿಂದಲೂ ವಿನಾಯಿತಿ ನೀಡಲಾಗಿದೆ. ಇನ್ನು ಮುಂದೆ ಈ ಸಂಸ್ಥೆಗಳು ವಿದ್ಯುಚ್ಛಕ್ತಿ, ನೀರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ತಗಲುವ ವೆಚ್ಚವನ್ನೂ ಭರಿಸಬೇಕಿಲ್ಲ. ಲಭ್ಯವಿರುವ ಕಡೆ ವಸತಿ ನಿಲಯಗಳನ್ನೂ ಉಚಿತವಾಗಿ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.

ADVERTISEMENT

‘ಐಒಎ ಹಾಗೂ ಎನ್‌ಎಸ್‌ಎಫ್‌ಗಳು ಸಾಯ್‌ ಮೈದಾನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿದರೆ ಅವರಿಗೆ ಉಚಿತವಾಗಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಊಟದ ವ್ಯವಸ್ಥೆಯನ್ನಷ್ಟೇ ಅವರು ಮಾಡಿಕೊಳ್ಳಬೇಕು’ ಎಂದು ಇತ್ತೀಚೆಗೆ ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಕ್ರೀಡೆಯನ್ನು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಸಾಯ್‌ ಕೈಗೊಂಡಿರುವ ಈ ತೀರ್ಮಾನದಿಂದಾಗಿ ಐಒಎ ಹಾಗೂ ಎನ್‌ಎಸ್‌ಎಫ್‌ಗಳು ನಿರಾಳವಾಗಿವೆ. ಇನ್ನು ಮುಂದೆ ಸಾಧ್ಯವಾದಷ್ಟು ಹೆಚ್ಚು ಕೂಟಗಳನ್ನು ಆಯೋಜಿಸಲು ಈ ಸಂಸ್ಥೆಗಳು ಮುಂದಾಗುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಭಾರತವನ್ನು ಬಲಿಷ್ಠ ಕ್ರೀಡಾ ರಾಷ್ಟ್ರವನ್ನಾಗಿ ರೂ‍‍ಪಿಸುವ ಕನಸಿಗೆ ಇದರಿಂದ ಬಲ ಬಂದಂತಾಗಿದೆ’ ಎಂದು ಸಾಯ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೊರೊನಾ ನಂತರದ ಕಾಲಘಟ್ಟದಲ್ಲಿ ಸಾಧ್ಯವಾದಷ್ಟು ಹೆಚ್ಚು ಕೂಟಗಳನ್ನು ನಡೆಸಲು ಇದು ಸಹಕಾರಿಯಾಗಲಿದೆ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.