ADVERTISEMENT

Chess: ಕಾರ್ಲ್‌ಸನ್‌ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ ಪ್ರಜ್ಞಾನಂದ

ಪಿಟಿಐ
Published 17 ಜುಲೈ 2025, 14:04 IST
Last Updated 17 ಜುಲೈ 2025, 14:04 IST
<div class="paragraphs"><p>F</p></div>

F

   

ಲಾಸ್‌ ವೇಗಸ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಫ್ರೀಸ್ಟೈಲ್‌ ಗ್ರ್ಯಾನ್‌ಸ್ಲಾಮ್‌ ಟೂರ್‌ ಕ್ವಾರ್ಟರ್‌ಫೈನಲ್ ತಲುಪುವ ಹಾದಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಸೋಲಿಸಿದರು.

ನಾರ್ವೆಯ ಆಟಗಾರ ಇತ್ತೀಚಿನ ದಿನಗಳಲ್ಲಿ ಭಾರತದ ಆಟಗಾರರೆದುರು ಮಣಿಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಕಾರ್ಲ್‌ಸನ್‌ ಅವರನ್ನು ಮಣಿಸಿದ್ದರು. ಗುಕೇಶ್‌ ಇಲ್ಲಿ ಆಡುತ್ತಿಲ್ಲ.

ADVERTISEMENT

19 ವರ್ಷದ ಪ್ರಜ್ಞಾನಂದ ಅವರು ಪೈಪೋಟಿ ಎದುರಿಸಿದರು. ಆದರೆ ಚಾಣಾಕ್ಷ ನಡೆಗಳಿಂದ ಅವರು ನಾರ್ವೆಯ ಆಟಗಾರರನ್ನು ಕಂಗೆಡಿಸಿದರು.

ಇದು ಎಷ್ಟು ಪರಿಣಾಮ ಬೀರಿತೆಂದರೆ ಕಾರ್ಲ್‌ಸನ್‌ ಮುಂದಿನ ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ ಅವರಿಗೆ ಮತ್ತು ಕೊನೆಯಲ್ಲಿ ಲೆವೊನ್ ಅರೋನಿಯನ್ ಅವರಿಗೂ (ಟೈಬ್ರೇಕರ್‌ನಲ್ಲಿ 2–0ಯಿಂದ) ಸೋತು ಟೂರ್ನಿಯಿಂದ ಹೊರಬಿದ್ದರು.

16 ಆಟಗಾರರು ಭಾಗವಹಿಸಿರುವ ಈ ಟೂರ್ನಿಯ ₹6.50 ಕೋಟಿ ಬಹುಮಾನ ಮೊತ್ತ ಹೊಂದಿದೆ.

ಈ ಆಟಗಾರರನ್ನು ತಲಾ ಎಂಟರಂತೆ ಎರಡು ಗುಂಪುಗಳಲ್ಲಿ (ವೈಟ್‌ ಮತ್ತು ಬ್ಲ್ಯಾಕ್‌ ಹೆಸರಿನಲ್ಲಿ) ವಿಂಗಡಿಸಲಾಗಿದೆ. ಗುಂಪುಗಳಲ್ಲಿ  ಒಂದು ಬಾರಿ ಪರಸ್ಪರ ಮುಖಾಮುಖಿಯ ನಂತರ ಮೊದಲ ನಾಲ್ಕು ಸ್ಥಾನ ಗಳಿಸಿದವರು ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುತ್ತಾರೆ. 

ಅರ್ಜುನ್ ಇರಿಗೇಶಿ ಅವರು ಇನ್ನೊಂದು ಗುಂಪಿನಿಂದ ಎಂಟರ ಘಟ್ಟ ತಲುಪಿದರು. ಆರಂಭದಲ್ಲಿ ಅವರು ಸ್ವಲ್ಪ ಪರದಾಡಿದರು. ‘ವೈಟ್‌’ ಗುಂಪಿನಲ್ಲಿದ್ದ ಪ್ರಜ್ಞಾನಂದ ಮತ್ತು ಉಜ್ಬೇಕಿಸ್ತಾನದ ನದಿರ್ಬೆಕ್‌ ಅಬ್ದುಸತ್ತಾರೋವ್‌ ಅವರು ತಲಾ 4.5 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಪಡೆದರು. ಜಾವೊಕಿರ್‌ ಸಿಂಧರೋವ್ ಮತ್ತು ಅರೋನಿಯನ್ ತಲಾ ನಾಲ್ಕು ಪಾಯಿಂಟ್ಸ್‌ ಪಡೆದರು. ಕಾರ್ಲ್‌ಸನ್‌ ಮತ್ತು ಜರ್ಮನಿಯ ವಿನ್ಸೆಂಟ್‌ ಕೀಮರ್‌ ಐದನೇ ಸ್ಥಾನ ಗಳಿಸಿದರು.

ಬ್ಲ್ಯಾಕ್‌ ಗುಂಪಿನಲ್ಲಿ ಹಿಕಾರು ನಕಾಮುರ ಅಮೋಘ ಆಟವಾಡಿ 7ರಲ್ಲಿ 6 ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನ ಪಡೆದರು. ಅಮೆರಿಕದ ಹ್ಯಾನ್ಸ್ ನೀಮನ್‌ (4.5) ಎರಡನೇ ಸ್ಥಾನ ಪಡೆದರು. ಇರಿಗೇಶಿ ಮತ್ತು ಸ್ಥಳೀಯ ಆಟಗಾರ ಫ್ಯಾಬಿಯಾನೊ ಕರುವಾನ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಜ್ಞಾನಂದ ಅವರು ಕರುವಾನ ಅವರನ್ನು ಎದುರಿಸಲಿದ್ದಾರೆ. ಇರಿಗೇಶಿ ಅವರು ಅಬ್ದುಸತ್ತಾರೋವ್ ವಿರುದ್ಧ ಆಡಲಿದ್ದಾರೆ. ಅರೋನಿಯನ್ ಅವರಿಗೆ ನಕಾಮುರ ಮತ್ತು ನೀಮನ್ ಅವರಿಗೆ ಸಿಂಧರೋವ್‌ ಎದುರಾಳಿಗಳಾಗಿದ್ದಾರೆ.

ಪ್ರಜ್ಞಾನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.