ADVERTISEMENT

ಫ್ರೆಂಚ್‌ ಓಪನ್‌: ಮೂರನೇ ಸುತ್ತಿಗೆ ಯಾನಿಕ್ ಸಿನ್ನರ್

ರಾಯಿಟರ್ಸ್
Published 29 ಮೇ 2025, 23:51 IST
Last Updated 29 ಮೇ 2025, 23:51 IST
<div class="paragraphs"><p>ಯಾನಿಕ್ ಸಿನ್ನರ್</p></div>

ಯಾನಿಕ್ ಸಿನ್ನರ್

   

ಪ್ಯಾರಿಸ್‌: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಗುರುವಾರ 6–3, 6–0, 6–4 ರಲ್ಲಿ ನೇರ ಸೆಟ್‌ಗಳಿಂದ ಸ್ಥಳೀಯ ತಾರೆ ರಿಚರ್ಡ್‌ ಗ್ಯಾಸ್ಕೆ ಅವರನ್ನು ಸದೆಬಡಿದು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ದಾಪುಗಾಲಿಟ್ಟರು.

ಇದು 38 ವರ್ಷ ವಯಸ್ಸಿನ ಗ್ಯಾಸ್ಕೆ ಅವರಿಗೆ ವಿದಾಯದ ಪಂದ್ಯವಾಗಿತ್ತು. 22ನೇ ಮತ್ತು ಕೊನೆಯ ಬಾರಿ ಕಣಕ್ಕಿಳಿದ ಅವರಿಗೆ ಪ್ರೇಕ್ಷಕರು ಹರ್ಷೋದ್ಗಾರಗಳ ಬೆಂಬಲ ನೀಡಿದರು. ಆದರೆ ಉತ್ತಮ ಲಯದಲ್ಲಿರುವ ಸಿನ್ನರ್ ಎರಡು ಗಂಟೆಗಳ ಒಳಗೆ ಪಂದ್ಯ ಗೆದ್ದರು.

ADVERTISEMENT

ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಕೊಕೊ ಗಾಫ್‌ ಕೂಡ ಮುನ್ನಡೆದರು. ಅಮೆರಿಕದ ಆಟಗಾರ್ತಿ 6–2, 6–4 ರಿಂದ ಝೆಕ್‌ ರಿಪಬ್ಲಿಕ್‌ನ ತೆರೇಸಾ ವೆಲೆನ್‌ಟೋವಾ ಅವರನ್ನು ಬಗ್ಗುಬಡಿದರು.

ಇನ್ನೊಂದು ಪಂದ್ಯದಲ್ಲಿ ಫ್ರೆಂಚ್‌ ಓಪನ್ ಮಾಜಿ ರನ್ನರ್ ಅಪ್ ಮರ್ಕೆತಾ ವೊಂದ್ರುಸೋವಾ 6–0, 4–6, 6–3 ರಿಂದ ಪೋಲೆಂಡ್‌ನ ಮ್ಯಾಗ್ಧಲಿನಾ ಫ್ರೆಚ್‌ ಅವರನ್ನು ಸೋಲಿಸಿದರು. ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ ಅವರ ಮುಂದಿನ ಎದುರಾಳಿ. 2024ರ ರನ್ನರ್ ಅಪ್‌, ಅಮೆರಿಕದ ಪೆಗುಲಾ ಫಿಲಿಪ್‌ ಶಾಟ್ರಿಯೆ ಕೋರ್ಟ್‌ನಲ್ಲಿ 6–3, 7–6 (7/3) ರಿಂದ ಸ್ವದೇಶದ ಆ್ಯನ್‌ ಲಿ ಅವರನ್ನು ಹಿಮ್ಮೆಟ್ಟಿಸಿದರು.

ಮಿನೋರ್ ನಿರ್ಗಮನ: ಒಂಬತ್ತನೇ ಶ್ರೇಯಾಂಕದ ಆಸ್ಟ್ರೇಲಿಯಾದ ಆಟಗಾರ ಅಲೆಕ್ಸ್ ಡಿ ಮಿನೋರ್ ಹೊರಬಿದ್ದರು. ಸೋಲಿನ ನಿರೀಕ್ಷೆಯೊಡನೆ ತವರಿಗೆ ಹೊರಡಲು ಸಜ್ಜಾಗಿದ್ದ ಮೊನಾಕೊ ಮೂಲದ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್‌ 2–6, 2–6, 6–4, 6–3, 6–2 ರಿಂದ ಅಲೆಕ್ಸ್‌ ಅವರನ್ನು ಸೋಲಿಸಿದರು.

‘ಈ ಪಂದ್ಯಕ್ಕೆ ತೆರಳುವ ಮೊದಲು, ಊರಿಗೆ ಹೊರಡಲು ವಿಮಾನ ಟಿಕೆಟ್‌ಗಳು ಲಭ್ಯವಿದೆಯೇ ಎಂದು ನಾನು ಪರಿಶೀಲಿಸುತ್ತಿದ್ದೆ’ ಎಂದು ಬುಬ್ಲಿಕ್ ಪಂದ್ಯದ ನಂತರ ಬಹಿರಂಗಪಡಿಸಿದರು.

ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಮಿಯೆರಾ ಆಂಡ್ರೀವಾ (ರಷ್ಯಾ) 6–3, 6–4ದಿಂದ ಅಮೆರಿಕದ ಆಶ್ಲಿನ್‌ ಕ್ರೂಜೆರ್ ಅವರ ಮೇಲೆ ಸುಲಭ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.