ಇಟಲಿಯ ಯಾನಿಕ್ ಸಿನ್ನರ್ ಅವರ ಆಟದ ವೈಖರಿ
ಪ್ಯಾರಿಸ್: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಮತ್ತು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು.
ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್ ಮೂರನೇ ಸುತ್ತಿನಲ್ಲಿ 6-0, 6-1, 6-2ರಿಂದ ಝೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು ನಿರಾಯಾಸವಾಗಿ ಮಣಿಸಿದರು. ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸಿನ್ನರ್ ಕೇವಲ ಒಂದು ಗಂಟೆ 34 ನಿಮಿಷದಲ್ಲಿ ವಿಶ್ವದ 34ನೇ ಕ್ರಮಾಂಕದ ಆಟಗಾರನನ್ನು ಹಿಮ್ಮೆಟ್ಟಿಸಿದರು.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ಸಿನ್ನರ್ ಅವರಿಗೆ 17ನೇ ಶ್ರೇಯಾಂಂಕದ ಆ್ಯಂಡ್ರೆ ರುಬ್ಲೆವ್ ಮುಂದಿನ ಎದುರಾಳಿ ಯಾಗಿದ್ದಾರೆ. ರಷ್ಯಾದ ರುಬ್ಲೆವ್ ಮೂರನೇ ಸುತ್ತಿನಲ್ಲಿ ಫ್ರಾನ್ಸ್‌ನ ಆರ್ಥರ್ ಫಿಲ್ಸ್ ಅವರನ್ನು ಎದುರಿಸಬೇಕಿತ್ತು. ಆದರೆ, ಫಿಲ್ಸ್ ಗಾಯಗೊಂಡು ಹಿಂದೆ ಸರಿದ ಕಾರಣ ರುಬ್ಲೆವ್ ವಾಕ್ ಓವರ್ ಪಡೆದರು.
ಉದ್ದೀಪನ ಮದ್ದು ಸೇವನೆಗಾಗಿ ಮೂರು ತಿಂಗಳ ನಿಷೇಧದ ಬಳಿಕ ವಾಪಸಾಗಿರುವ ಸಿನ್ನರ್ ಅವರು ಉತ್ತಮ ಲಯದಲ್ಲಿದ್ದಾರೆ. ಈತನಕ ನಡೆದ ಮೂರು ಸುತ್ತಿಗಳಲ್ಲಿ ಒಂದೂ ಸೆಟ್ ಕಳೆದುಕೊಳ್ಳದೆ ಪಾರಮ್ಯ ಮೆರೆದಿದ್ದಾರೆ. ಅಮೆರಿಕ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿರುವ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಗೆಲುವಿನ ಸರಣಿಯನ್ನು 17 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.
ಎರಡನೇ ಶ್ರೇಯಾಂಕದ ಅಲ್ಕರಾಜ್ 6-1, 6-3, 4-6, 6-4ರ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಡ್ಯಾಮಿರ್ ಜುಮ್‌ಹರ್ ಅವರನ್ನು ಸೋಲಿಸಿದರು. ಬೋಸ್ನಿಯನ್‌ನ 33 ವರ್ಷ ವಯಸ್ಸಿನ ಡ್ಯಾಮಿರ್ ಅವರು ಮೂರನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿ, ಕೊಂಚ ಪ್ರತಿರೋಧ ತೋರಿದರು. ನಾಲ್ಕನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಪ್ರಯತ್ನದಲ್ಲಿರುವ ಸ್ಪೇನ್‌ನ ಅಲ್ಕರಾಜ್, ಮುಂದಿನ ಸುತ್ತಿನಲ್ಲಿ 13ನೇ ಶ್ರೇಯಾಂಕದ ಬೆನ್ ಶೆಲ್ಟನ್ (ಅಮೆರಿಕ) ಅವರ ಸವಾಲನ್ನು ಎದುರಿಸಲಿದ್ದಾರೆ.
ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ನೇರ ಸೆಟ್‌ಗಳ ಗೆಲುನೊಂದಿಗೆ ಮುನ್ನಡೆದರು. ಜರ್ಮನಿಯ ಜ್ವರೇವ್ 6-2 7-6(4) 6-1ರಿಂದ ಇಟಲಿಯ ಫ್ಲೇವಿಯೊ ಕೊಬೊಲ್ಲಿ ಅವರನ್ನು ಸೋಲಿಸಿ, ಸತತ ಎಂಟನೇ ಬಾರಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಾಲ್ಕನೇ ಸುತ್ತು ತಲುಪಿದರು. ಕಳೆದ ವರ್ಷ ಫೈನಲ್‌ನಲ್ಲಿ ಅಲ್ಕರಾಜ್ ಅವರಿಗೆ ಸೋತಿದ್ದರು.
ಪೆಗುಲಾ, ಮಿರಾ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 3-6, 6-4, 6-2ರ ಸೆಟ್‌ಗಳಿಂದ ಝೆಕ್ ರಿಪಬ್ಲಿಕ್‌ನ ಮಾರ್ಕೆಟಾ ವೊಂಡ್ರೊಸೊವಾ ಅವರನ್ನು ಸೋಲಿಸಿ, ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅಮೆರಿಕ ಓಪನ್ ರನ್ನರ್ ಅಪ್ ಪೆಗುಲಾ ಅವರಿಗೆ ಲೋಯಿಸ್ ಬಾಯಿಸನ್ (ಫ್ರಾನ್ಸ್) ಮುಂದಿನ ಎದುರಾಳಿ.
ರಷ್ಯಾದ ಉದಯೋನ್ಮುಖ ತಾರೆ ಮಿರಾ ಆ್ಯಂಡ್ರೀವಾ 6-3, 6-1ರಿಂದ ಕಜಕಸ್ತಾನದ ಯೂಲಿಯಾ ಪುಟಿನ್ಸೆವಾ ವಿರುದ್ಧ ಜಯ ಸಾಧಿಸಿ ಕೊನೆಯ 16ರ ಘಟ್ಟ ಪ್ರವೇಶಿಸಿದರು. ಆರನೇ ಶ್ರೇಯಾಂಕದ ಆ್ಯಂಡ್ರೀವಾ ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ಡೇರಿಯಾ ಕಸತ್ಕಿನಾ (17ನೇ ರ‍್ಯಾಂಕ್) ವಿರುದ್ಧ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.