ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಇಗಾ ಮುಡಿಗೆ ಕಿರೀಟ

ಫ್ರೆಂಚ್‌ ಓಪನ್‌: 23ನೇ ಪ್ರಶಸ್ತಿ ಮೇಲೆ ಜೊಕೊವಿಚ್‌ ಚಿತ್ತ

ಎಎಫ್‌ಪಿ
Published 11 ಜೂನ್ 2023, 3:34 IST
Last Updated 11 ಜೂನ್ 2023, 3:34 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಇಗಾ ಶ್ವಾಂಟೆಕ್‌ –ಎಎಫ್‌ಪಿ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ಇಗಾ ಶ್ವಾಂಟೆಕ್‌ –ಎಎಫ್‌ಪಿ ಚಿತ್ರ   

ಪ್ಯಾರಿಸ್‌ : ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.

ಫಿಲಿಪ್‌ ಶಾಟ್ರಿಯೆರ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಅವರು 6-2, 5-7, 6-4 ರಲ್ಲಿ ಜೆಕ್‌ ರಿಪಬ್ಲಿಕ್‌ನ ಕರೋಲಿನಾ ಮುಕೋವಾ ವಿರುದ್ಧ ಗೆದ್ದರು.

22 ವರ್ಷದ ಇಗಾ ಅವರಿಗೆ ಫ್ರೆಂಚ್‌ ಓಪನ್‌ನಲ್ಲಿ ದೊರೆತ ಮೂರನೇ ಪ್ರಶಸ್ತಿ ಇದು. ಒಟ್ಟಾರೆಯಾಗಿ ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದರು. 2020 ಮತ್ತು 2022 ರಲ್ಲಿ ಅವರು ಇಲ್ಲಿ ಚಾಂಪಿಯನ್‌ ಆಗಿದ್ದರು. ಕಳೆದ ವರ್ಷ ಅಮೆರಿಕ ಓಪನ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು.

ADVERTISEMENT

ಜಸ್ಟಿನ್ ಹೆನಿನ್‌ ಬಳಿಕ (2007 ರಲ್ಲಿ) ಇಲ್ಲಿ ಸತತ ಎರಡು ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಒಲಿಯಿತು.

ಎರಡು ಗಂಟೆ 46 ನಿಮಿಷ ನಡೆದ ಫೈನಲ್‌ನಲ್ಲಿ ಮುಕೋವಾ ಅವರು ಎದುರಾಳಿಗೆ ತಕ್ಕ ಪೈಪೋಟಿ ನೀಡಿದರು. ಆದರೆ ಒತ್ತಡವನ್ನು ಸಮರ್ಥವಾಗಿ ಮೀರಿ ನಿಂತ ಇಗಾ, ಚಾಂಪಿಯನ್‌ ಆದರು.

ಜೊಕೊವಿಚ್‌ಗೆ 23ನೇ ಕಿರೀಟದ ನಿರೀಕ್ಷೆ: ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯದ ನೊವಾಕ್‌ ಜೊಕೊವಿಚ್ ಅವರು ನಾರ್ವೆಯ ಕ್ಯಾಸ್ಪರ್‌ ರೂಡ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

36 ವರ್ಷದ ಜೊಕೊವಿಚ್‌ ಗೆದ್ದರೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇದೀಗ ಅವರು ಅತಿಹೆಚ್ಚು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ದಾಖಲೆಯನ್ನು ಸ್ಪೇನ್‌ನ ರಫೆಲ್‌ ನಡಾಲ್‌ ಜತೆ ಹಂಚಿಕೊಂಡಿದ್ದಾರೆ. ಇಬ್ಬರೂ 22 ಟ್ರೋಫಿ ಜಯಿಸಿದ್ದಾರೆ. ಸರ್ಬಿಯದ ಆಟಗಾರ ಭಾನುವಾರ ಚಾಂಪಿಯನ್‌ ಆದರೆ, ನಡಾಲ್‌ ಅವರನ್ನು ಹಿಂದಿಕ್ಕಲಿದ್ದಾರೆ.

ಅದೇ ರೀತಿ ಫ್ರೆಂಚ್‌ ಓಪನ್‌ ಗೆದ್ದ ಅತಿ ಹಿರಿಯ ಆಟಗಾರ ಎಂಬ ಗೌರವ ಅವರಿಗೆ ಲಭಿಸಲಿದೆ. ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳನ್ನು ಕನಿಷ್ಠ ಮೂರು ಸಲ ಗೆದ್ದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆಯೂ ಒಲಿಯಲಿದೆ. ಅವರು ಈ ಹಿಂದೆ 2016 ಮತ್ತು 2021 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು.

24 ವರ್ಷದ ರೂಡ್‌ ಅವರು 2022 ರಲ್ಲಿ ಇಲ್ಲಿ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ಎದುರು ಸೋತಿದ್ದರು. ಜೊಕೊವಿಚ್‌ ವಿರುದ್ದ ಅವರು ಇದುವರೆಗೆ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನೂ ಸೋತಿದ್ದಾರೆ. ಮಾತ್ರವಲ್ಲ, ಒಂದು ಸೆಟ್‌ ಕೂಡಾ ಗೆದ್ದಿಲ್ಲ. ಆದ್ದರಿಂದ ಭಾನುವಾರ ಜೊಕೊವಿಚ್‌ ಗೆಲ್ಲುವ ‘ಫೇವರಿಟ್‌’ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.