ADVERTISEMENT

ಬೆಂಕಿಯಿಂದ ಪಾರಾಗಿ ಪದಕಕ್ಕೆ ಗುರಿ ಇಟ್ಟರು!

ಪಿಟಿಐ
Published 15 ಮಾರ್ಚ್ 2021, 16:40 IST
Last Updated 15 ಮಾರ್ಚ್ 2021, 16:40 IST
ಆರ್ಚರಿ
ಆರ್ಚರಿ   

ಕೋಲ್ಕತ್ತ: ಬೆಂಕಿಯಲ್ಲಿ ಉರಿದ ರೈಲಿನಲ್ಲಿ ಪ್ರಾಣ ಉಳಿಸಿಕೊಂಡ ಅವರು ಉಪಕರಣಗಳೆಲ್ಲವನ್ನೂ ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದುಕೊಂಡರು. ಅವರ ಧೈರ್ಯ ಮತ್ತು ಸಾಹಸವನ್ನು ಮೆಚ್ಚಿರುವ ಕ್ರೀಡಾಪ್ರೇಮಿಗಳು ಅಭಿನಂದನೆಯ ಮಳೆ ಸುರಿದಿದ್ದಾರೆ.

ಮಧ್ಯಪ್ರದೇಶದ ಜೂನಿಯರ್ ಆರ್ಚರಿಪಟುಗಳ ಯಶೋಗಾಥೆ ಇದು. ಕಳೆದ ವಾರ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಈ ಕ್ರೀಡಾಪಟುಗಳ ಉಪಕರಣಗಳು ಸುಟ್ಟುಹೋಗಿದ್ದವು. ಆದರೆ ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದು ಸಂಭ್ರಮಿಸಿದ್ದಾರೆ.

ಡೆಹ್ರಾಡೂನ್‌ ತಲುಪಲು ಒಂದು ತಾಸು ಇರುತ್ತಿದ್ದಂತೆ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆತಂಕಗೊಂಡ ಕ್ರೀಡಾಪಟುಗಳು ಪಕ್ಕದ ಬೋಗಿಗೆ ತೆರಳಿದ್ದರು. ಆದರೆ ಜೊತೆಗೆ ತೆಗೆದುಕೊಂಡು ಬಂದಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾದವು. ಆಧಾರ್ ಕಾರ್ಡ್ ಒಳಗೊಂಡಂತೆ ಎಲ್ಲ ಪ್ರಮಾಣಪತ್ರಗಳೂ ಬೆಂಕಿಗೆ ಆಹುತಿಯಾಗಿದ್ದವು.

ADVERTISEMENT

ಭಾನುವಾರ ನಡೆದ ಸ್ಪರ್ಧೆಗಾಗಿ ಹೊಸ ಉಪಕರಣಗಳನ್ನು ಖರೀದಿಸಲಾಯಿತು. ಹಿಂದಿನ ದಿನ ಯಾವ ಅಭ್ಯಾಸವೂ ಮಾಡಲು ಸಾಧ್ಯವಾಗಲಿಲ್ಲ. ಆದರೂ ರಿಕರ್ವ್ ವಿಭಾಗದಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ, ಕಾಂಪೌಂಡ್ ವಿಭಾಗದಲ್ಲಿ ಒಂದು ಬೆಳ್ಳಿ ಪದಕ ಗೆದ್ದುಕೊಂಡರು.

ಹತ್ತನೇ ತರಗತಿಯಲ್ಲಿ ಓದುತ್ತಿರುವ ಸೋನಿಯಾ ಠಾಕೂರ್‌ ಮತ್ತು ಟ್ರಕ್‌ ಚಾಲಕನ ಮಗ ಅಮಿತ್ ಕುಮಾರ್ ಕೂಡ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.